ಚಿತ್ರದುರ್ಗ: ಸಾಹಿತ್ಯ ರಚನೆ ಮತ್ತು ಸಂಶೋಧನೆಯಲ್ಲಿ ಕ್ರಿಯಾಶೀಲರಾಗಿರುವ ಚಿತ್ರದುರ್ಗ ಜಿಲ್ಲೆಯ ಸಾಹಿತಿ ಡಾ. ಬಿ.ರಾಜಶೇಖರಪ್ಪ ಅವರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ದಕ್ಕಿರುವುದು ಜಿಲ್ಲೆಗೆ ಕೀರ್ತಿ ತಂದಿದೆ.
ವೃತ್ತಿಯಿಂದ ಕನ್ನಡ ಪ್ರಾಧ್ಯಾಪಕರಾಗಿ, ಪ್ರವೃತ್ತಿಯಿಂದ ಸಾಹಿತಿಗಳು, ಇತಿಹಾಸ ಸಂಶೋಧಕರು, ಶಾಸನ ತಜ್ಞರೂ ಆಗಿರುವ ಇವರನ್ನು ಸರ್ಕಾರ ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಇವರು ಮೂಲತಃ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕೊಕ್ಕನೂರಿನವರಾಗಿದ್ದು, ಕೋಟೆನಾಡು ಚಿತ್ರದುರ್ಗದಲ್ಲಿ ಸತತ 34 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ಇಲ್ಲೇ ವಾಸವಾಗಿದ್ದರು. 2005ರಲ್ಲಿ ಪ್ರಾಧ್ಯಾಪಕ ವೃತ್ತಿಗೆ ನಿವೃತ್ತಿ ಹೊಂದಿದ ಬಳಿಕ ಸಾಹಿತ್ಯ ರಚನೆ ಮತ್ತು ಸಂಶೋಧನೆಯಲ್ಲಿ ಈಗಲೂ ಕ್ರಿಯಾಶೀಲರಾಗಿರುವ ಸಾಹಿತಿ ಡಾ. ಬಿ.ರಾಜಶೇಖರಪ್ಪ ಅವರನ್ನು ರಾಜ್ಯ ಸರ್ಕಾರ ಗುರುತಿಸಿದೆ. ಇವತ್ತಿನವರೆಗೂ ನಾನು ಯಾವುದೇ ಪ್ರಶಸ್ತಿಗಳಿಗೆ ಅರ್ಜಿ ಹಾಕಿದವನಲ್ಲ. ಈಗಲೂ ನಾನು ಹಾಕಿಲ್ಲ. ಆದರೆ ಪ್ರಶಸ್ತಿಯೇ ನನ್ನನ್ನು ಹುಡುಕಿಕೊಂಡು ಬಂದಿರುವುದು ನನಗೆ ಅತೀವ ಸಂತೋಷ ತಂದಿದೆ. ಈ ಪ್ರಶಸ್ತಿ ಕೋಟೆನಾಡು ಚಿತ್ರದುರ್ಗಕ್ಕೆ ಬಂದಿದೆ ಎಂದು ಭಾವಿಸುತ್ತೇನೆ ಅಂತಾರೆ ಸಾಹಿತಿಗಳು.