ಚಿತ್ರದುರ್ಗ: ತಾಲೂಕಿನ ವಿಜಾಪುರ ಗ್ರಾಮದ ದ್ವಾರದ ಎದುರಿರುವ ಹೆದ್ದಾರಿ ರಸ್ತೆ ದಾಟಲು ಗ್ರಾಮಸ್ಥರು ಭಯ ಪಡೆಬೇಕಾದ ವಾತಾವರಣ ನಿರ್ಮಾಣವಾಗಿದೆ. ರಸ್ತೆ ದಾಟುವ ಸಂದರ್ಭದಲ್ಲಿ ಅಪಘಾತವಾಗುತ್ತಿದ್ದು, ಗ್ರಾಮಸ್ಥರು ಪ್ರಾಣಾಪಾಯ ಎದುರಿಸುತ್ತಿದ್ದಾರೆ ಎಂದು ಜಿಲ್ಲಾಡಳಿತ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕುತ್ತಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 04ರಲ್ಲಿ ವೇಗವಾಗಿ ಬರುವ ವಾಹನಗಳು ಗ್ರಾಮಸ್ಥರಿಗೆ ಪ್ರಾಣಾಪಾಯ ತಂದೊಡ್ಡುತ್ತಿವೆ. ಅಂದಾಜು 1,200 ಜನರು ವಾಸವಿರುವ ಈ ಗ್ರಾಮದಲ್ಲಿ ನಿತ್ಯ ಕೃಷಿ ಚಟುವಟಿಕೆ ಮಾಡಲು ಹೆದ್ದಾರಿ ದಾಟಿಕೊಂಡೇ ಹೋಗಬೇಕು. ಶಾಲಾ-ಕಾಲೇಜಿಗೆ ತೆರಳಲು ಮಕ್ಕಳು ಸಹ ಇದೇ ರಸ್ತೆ ದಾಟಬೇಕಿದೆ. ಜಾನುವಾರುಗಳು, ಸಾಕು ಪ್ರಾಣಿಗಳು ಕೂಡ ವಾಹನಗಳಿಗೆ ಸಿಕ್ಕಿ ಪ್ರಾಣ ಕಳೆದುಕೊಳ್ಳುತ್ತಿವೆ ಎಂಬುದು ಗ್ರಾಮದ ಜನತೆಯ ದೂರು.
ಗ್ರಾಮದ ಸುತ್ತಮುತ್ತಲಿನ ಐದಾರು ಊರುಗಳ ಜನರು ಪ್ರತಿ ದಿನ ಗ್ರಾಮಕ್ಕೆ ಬರುತ್ತಿರುತ್ತಾರೆ. ಹೆದ್ದಾರಿಯಲ್ಲಿ ಅಧಿಕಾರಿಗಳು ರಸ್ತೆ ಸುರಕ್ಷತಾ ಕ್ರಮಕ್ಕೆ ಮುಂದಾಗದಿರೋದು ಗ್ರಾಮಸ್ಥರನ್ನು ಕೆರಳಿಸಿದೆ.
ಸೇತುವೆ ನಿರ್ಮಾಣಕ್ಕೆ ಆಗ್ರಹ
ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಗ್ರಾಮಕ್ಕೆ ಹೆದ್ದಾರಿಯಲ್ಲಿ ಸೇತುವೆ ನಿರ್ಮಾಣ ಮಾಡುವಂತೆ ಹಲವು ವರ್ಷಗಳಿಂದ ಜನರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರಂತೆ. ಆದ್ರೆ ಅಧಿಕಾರಿ ವರ್ಗ ಗ್ರಾಮದ ಜನತೆ ಕಷ್ಟಕ್ಕೆ ಸ್ಪಂದಿಸುವ ಕಾರ್ಯ ಮಾಡುತ್ತಿಲ್ಲ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ.
ಜನರು ಹೆದ್ದಾರಿ ತಡೆ ನಡೆಸುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಎಎಸ್‌ಪಿ ಮಹಾಲಿಂಗ ನಂದಗಾವಿ, ಸೇತುವೆ ನಿರ್ಮಾಣ ಕುರಿತು ಮೇಲಧಿಕಾರಿಗಳ ಜೊತೆಗೆ ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ನಿಯಂತ್ರಣ ತಪ್ಪಿ ಮರಕ್ಕೆ ಗುದ್ದಿದ ಕಾರು; ಇಬ್ಬರು ಸಾವು, ಮೂವರು ಗಂಭೀರ