ಚಿತ್ರದುರ್ಗ: ಜಿಲ್ಲೆಯ ಪ್ರಮುಖ ಬೆಳೆಯಾದ ಈರುಳ್ಳಿ ಬೆಳೆ ಕುಂಭದ್ರೋಣ ಮೆಳೆಗೆ ನೆಲಕಚ್ಚಿ ರೈತರು ಹೈರಾಣಾಗಿದ್ದರು. ಮಾರುಕಟ್ಟೆಗೆ ಈರುಳ್ಳಿ ಬಾರದೇ ಇರುವುದರಿಂದ ಅದರ ಬೆಲೆ ಇದೀಗ ಗ್ರಾಹಕರಿಗೆ ಕಣ್ಣೀರು ತರಿಸುತ್ತಿದೆ. ಮಾರುಕಟ್ಟೆಗೆ ಈರುಳ್ಳಿ ರಫ್ತಾಗದೇ ಇರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣ ಆಗಿದೆ. ಈರುಳ್ಳಿ ಖರೀದಿ ಮಾಡಲು ಜನರು ಹಿಂದೇಟು ಹಾಕುತ್ತಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ.
ಬರದನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಹಾಕಿದ್ದ ಈರುಳ್ಳಿ ಬೆಳೆ ಮಳೆಯ ಹೊಡೆತಕ್ಕೆ ನೆಲಕಚ್ಚಿದ್ದರಿಂದ ಮಾರುಕಟ್ಟೆಗೆ ಈರುಳ್ಳಿ ರಫ್ತಾಗದೇ ಇರುವುದಕ್ಕೆ ಈರುಳ್ಳಿ ಬೆಲೆ ಗಗನಕ್ಕೇರಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಈಗಾಗಲೇ ಸಾಕಷ್ಟು ರೈತರು ಬೆಳೆಯನ್ನು ಕಳೆದುಕೊಂಡು ತಿಪ್ಪೆಗೆ ಎಸದ ಈರುಳ್ಳಿ ಇದೀಗ ಗಗನಕ್ಕೇರಿದೆ.
ಗಗನಕ್ಕೇರಿರುವ ಈರುಳ್ಳಿಯನ್ನು ಗ್ರಾಹಕರು ಖರೀದಿಸಲು ಹಿಂದೇಟು ಹಾಕುತ್ತಿದ್ದಾರಂತೆ. ಮಾರುಕಟ್ಟೆಯಲ್ಲಿ ಈರುಳ್ಳಿ ಇಲ್ಲದೇ ಇರುವುದರಿಂದ ಒಂದು ಕೆಜಿ ಒಣ ಈರುಳ್ಳಿ ಗೆಡ್ಡಗೆ 100 ರೂಪಾಯಿ ದರ ನಿಗದಿ ಪಡಿಸಲಾಗಿದೆ. ಒಂದು ಕೆ.ಜಿ ಈರುಳ್ಳಿ ಬೆಲೆ 100 ರೂಪಾಯಿ ಗಡಿದಾಟಿದ್ದರಿಂದ ಗ್ರಾಹಕರು ಈರುಳ್ಳಿಯತ್ತ ಸುಳಿಯುತ್ತಿಲ್ಲವಂತೆ. ಇನ್ನು ಬಡವರ್ಗದ ಜನರು ಕೆಲಸ ಮಾಡಿ ಬಂದ ಕಡಿಮೆ ಹಣದಲ್ಲೇ ಒಂದು ಕೇಜಿ ಈರುಳ್ಳಿ ಖರೀದಿ ಮಾಡುವ ಬಡಲು ಅದೇ ಒಂದು ನೂರು ರೂಪಾಯಿಯಲ್ಲಿ ಇತರ ಮೂರ್ನಾಲ್ಕು ತರಹದ ತರಕಾರಿಯನ್ನು ಖರೀದಿ ಮಾಡುತ್ತಿದ್ದಾರಂತೆ.
ಈಗಾಗಲೇ ಮಾರುಕಟ್ಟೆಯಲ್ಲಿ ಒಂದು ಕ್ವಿಂಟಾಲ್ ಈರುಳ್ಳಿಗೆ 6 ರಿಂದ 7 ಸಾವಿರ ರೈತರಿಂದ ಖರೀದಿ ಮಾಡಲಾಗುತ್ತಿದೆಯಂತೆ. ಒಂದು ಕ್ವಿಂಟಾಲ್ ಈರುಳ್ಳಿಯನ್ನು ಆರೇಳು ಸಾವಿರಕ್ಕೆ ಖರೀದಿ ಮಾಡಿ ಬೇರೆ ಅಂಗಡಿಗಳಲ್ಲಿ ಹಾಗೂ ತರಕಾರಿ ಮಾರುಕಟ್ಟೆಯಲ್ಲಿ ಕೆ.ಜಿಗೆ 80 ರಿಂದ 100 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಚಿಕ್ಕ ಹಾಗೂ ಅತಿ ಚಿಕ್ಕ ಈರುಳ್ಳಿ ಗೆಡ್ಡೆ ಒಂದು ಕೆ.ಜಿಯ ಬೆಲೆ 60 ರಿಂದ 80 ರೂಪಾಯಿಗೆ ತರಕಾರಿ ಮಾರುಕಟ್ಟೆಲ್ಲಿ ಮಾರಾಟ ಮಾಡಲಾಗುತ್ತಿದ್ದು, ಒಣಗಿದ ದೊಡ್ಡ ಒಳ್ಳೆ ಈರುಳ್ಳಿಯನ್ನು 100 ರೂಪಾಯಿಗಿಂತ ಕಡಿಮೆ ಇಲ್ಲದೇ ಮಾರಾಟ ಮಾಡಲಾಗುತ್ತಿದೆ. ಇದನ್ನು ಖರೀದಿಸಲು ಗ್ರಾಹಕರು ಹಿಂದೇಟು ಹಾಕುತ್ತಿದ್ದಾರೆ.
ಒಟ್ಟಾರೆ ಮಳೆಯ ಹೊಡೆತಕ್ಕೆ ಸಿಲುಕಿ ಬೆಳೆ ನಷ್ಟ ಆಗಿದ್ದರಿಂದ ಈರುಳ್ಳಿ ಬೆಲೆ ಈಗಾಗಲೇ ಗಗನಕ್ಕೇರಿರುವುದರಿಂದ ಗ್ರಾಹಕರ ಜೇಬಿಗೆ ಕತ್ತರಿ ಬೀಳಲಿದೆ.