ಚಿತ್ರದುರ್ಗ : ತೋಟಗಾರಿಕೆ ಬೆಳೆಗೆ ಉತ್ತೇಜನ ನೀಡಲು ಸರ್ಕಾರ ಹಲವಾರು ಯೋಜನೆಗಳನ್ನ ಜಾರಿ ಮಾಡಿದೆ. ಆದರೆ, ಹಿರಿಯೂರು ತಾಲೂಕಿನ ಉಡುವಳ್ಳಿ ಗ್ರಾಮದ ರೈತ ಬೆಳೆದ ಬೆಳೆ ಮುಂದೆ ಬೋರ್ಡ್ ಹಾಕಿ ಅಧಿಕಾರಿಗಳು ಸಹಾಯಧನ ಬರುತ್ತೇ ಎಂದು ಪಂಗನಾಮ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ರೈತ ಮಹಾಂತೇಶ್ ಎಂಬವರು ಕಳೆದ ವರ್ಷ ತೋಟಗಾರಿಕೆ ಬೆಳೆ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಬಳಿಕ ರೈತ ಮಹಾಂತೇಶ್ ಸಾಲ ಸೂಲ ಮಾಡಿಕೊಂಡು ಒಂದು ಎಕರೆ ಹತ್ತು ಗುಂಟೆ ಜಮೀನಿನಲ್ಲಿ ಬಾಳೆಗಿಡ ನೆಟ್ಟಿದ್ದಾರೆ. ಅಧಿಕಾರಿಗಳು ರೈತನ ಹೆಸರಿನಲ್ಲಿ ಸರ್ಕಾರ ನೀಡುವ ಸಹಾಯಧನ ಹಣ ಬಳಸಿಕೊಂಡಿದ್ದಾರೆ ಎಂಬ ಆರೋಪ ರೈತ ಮಾಡುತ್ತಿದ್ದಾನೆ. ಬೆಳೆ ಫಸಲಿನ ಹಂತಕ್ಕೆ ತಲುಪಿದರು ತೋಟಗಾರಿಕೆ ಅಧಿಕಾರಿಗಳು ಮಾತ್ರ ಪೋತ್ಸಾಹ ಹಣ ನೀಡಿಲ್ಲ ಎಂದು ರೈತ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದಾನೆ.
ಏನಿದು ಘಟನೆ: ತೋಟಗಾರಿಕೆ ಇಲಾಖೆ ನರೇಗಾ ಯೋಜನೆಯಡಿ ಬಾಳೆ ಬೆಳೆಗೆ ಸಹಾಯಧನ ಪಡೆಯಲು ರೈತ ಮಹಾಂತೇಶ್ ಅರ್ಜಿ ಸಲ್ಲಿದ್ದರು. ಬಳಿಕ ಸಹಾಯಧನ ಸಿಗುತ್ತದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತನಿಂದ ಬೆಳೆಯ ದಾಖಲಾತಿಗಳು ಪಡೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಬಳಿಕ ನರೇಗಾ ಯೋಜನೆಯಡಿ ಕಾರ್ಮಿಕರ ಬಳಕೆ ಮಾಡಿಕೊಂಡು ಲಕ್ಷಾಂತರ ರೂ . ಹಣ ಖರ್ಚು ಮಾಡಿದ ರೈತ, ಒಂದೂವರೆ ಎಕರೆ ಹೊಲದಲ್ಲಿ ಬಾಳೆ ಗಿಡ ಬೆಳೆದಿದ್ದಾನೆ. ತದನಂತರದಲ್ಲಿ ಅಧಿಕಾರಿಗಳು ಯೋಜನೆಯ ಸಬ್ಸಿಡಿ ಬೋರ್ಡ್ ಹೊಲದ ಮುಂಭಾದಲ್ಲಿ ಅಳವಡಿಕೆ ಮಾಡಿ ಹಣ ಲಪಟಾಯಿಸಿದ್ದಾರೆ ಎಂದು ರೈತ ಆರೋಪ ಮಾಡುತ್ತಿದ್ದಾನೆ.
ಓದಿ : ಪರಿಷತ್ನಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಪಾಸ್: ಗೋ ಪೂಜೆ ನೆರವೇರಿಸಿದ ಸಿಎಂ!
ಇದಲ್ಲದೇ ಸಹಾಯಧನ ಆರ್ಡರ್ ಕಾಪಿಯನ್ನ ಹಿರಿಯೂರಿನ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಫಲಾನುಭವಿಗೆ ನೀಡಿದ್ದಾರೆ. ಸಬ್ಸಿಡಿ ಹಣಕ್ಕೆ ರೈತ ಮಹಾಂತೇಶ್ ಜಾತಕ ಪಕ್ಷಿಯಂತೆ ಕಾದುಕುಳಿತರು, ಇದುವರಿಗೂ ಅಧಿಕಾರಿಗಳು ಹಣ ನೀಡದಿರೋದು ರೈತ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಅಧಿಕಾರಿಗಳು ಫಲಾನುಭವಿಗೆ ನೀಡಿದ ದಾಖಲೆಯಲ್ಲಿ ಉಡುವಳ್ಳಿ ಗ್ರಾಮ ಪಂಚಾಯತ್ ಅಭಿವೃದ್ಧಿಕಾರಿ, ಹಿರಿಯೂರು ತೋಟಗಾರಿಕೆ ಇಲಾಖೆ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಸೀಲ್ ಹಾಗೂ ಸಹಿ ಹಾಕಿರುವ ಆದೇಶ ದಾಖಲೆ ಮೇಲಾಧಿಕಾರಿಗಳ ಗಮನಕ್ಕೆ ರೈತ ತಂದರೂ, ಅಧಿಕಾರಿಗಳು ಮಾತ್ರ ತಮಗೂ ಇದಕ್ಕೂ ಸಂಬಂಧವಿಲ್ಲದಂತೆ ವರ್ತನೆ ಮಾಡುತ್ತಿದ್ದಾರೆಂತೆ. ಅಲ್ಲದೆ ಉಡುವಳ್ಳಿ ಗ್ರಾಮದ ಕೆಲವು ರೈತರಿಗೆ 2016-17 ನೇ ಸಾಲಿನ, ಡ್ರಿಪ್ ಇರಿಗೇಷನ್ ಯೋಜನೆಯ ಸಬ್ಸಿಡಿ ನೀಡುವುದಾಗಿ ಅಧಿಕಾರಿಗಳು ಜಮೀನಿಗಳಿಗೆ ನಾಮಫಲಕ ಅವಳಡಿಕೆ ಮಾಡಿ ಪೋತ್ಸಾಹ ಹಣ ನೀಡದೆ ರೈತರಿಗೆ ವಂಚನೆ ಮಾಡಿದ್ದಾರೆ ಎಂಬ ಆರೋಪ ರೈತರು ಮಾಡುತ್ತಿದ್ದಾರೆ.
ರೈತರ ಆರೋಪಕ್ಕೆ ಅಧಿಕಾರಿಗಳ ಪ್ರತಿಕ್ರಿಯೆ : ಈ ಬಗ್ಗೆ ತೋಟಗಾರಿಕೆ ಇಲಾಖೆಯ ಸಹಾಯ ನಿರ್ದೇಶಕ ಲೋಕೇಶ್ ಅವರನ್ನ ಕೇಳಿದರೆ, ಉಡುವಳ್ಳಿ ರೈತ ಮಹಾಂತೇಶ್ ಅವರಿಗೆ ಸಹಾಯಧನ ಬರದಿರೋದು ಈಗ ಗೊತ್ತಾಗಿದೆ. ಸ್ಥಳ ಪರಿಶೀಲನೆ ನಡೆಸಿ ರೈತನಿಗೆ ಸಬ್ಸಿಡಿ ಹಣ ನೀಡಲು ಕ್ರಮಕ್ಕೆ ಮುಂದಾಗುತ್ತೇವೆ. ತಾಂತ್ರಿಕ ದೋಷ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗುತ್ತೇವೆ ಎಂದು ಹೇಳಿದ್ದಾರೆ.