ಚಿತ್ರದುರ್ಗ: ಗ್ರಾಮೀಣಾಭೀವೃದ್ಧಿಯ ಹಲವು ಯೋಜನೆಗಳಿಗೆ ಕೇಂದ್ರ ಸರ್ಕಾರ ಅನುದಾನ ನೀಡುತ್ತಿದ್ದು, ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಅಭಿವೃದ್ಧಿಗೆ ಒತ್ತು ನೀಡುವ ವ್ಯಕ್ತಿಗಳನ್ನು ಆಯ್ಕೆ ಮಾಡಿ. ಎಲ್ಲರೂ ಮತದಾನ ಮಾಡುವಂತೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆಎಸ್ ಈಶ್ವರಪ್ಪ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 6,812 ಗ್ರಾಮ ಪಂಚಾಯಿತಿಗಳಿಗೆ ಸೌರ ವಿದ್ಯುತ್ ಅಳವಡಿಕೆಗೆ ಅನುಮೋದನೆ ನೀಡಲಾಗಿದೆ. ತಜ್ಞರ ಜೊತೆಗೆ ಚರ್ಚಿಸಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಸೌರ ವಿದ್ಯತ್ ಅಳವಡಿಕೆಯಿಂದ ಪಂಚಾಯಿತಿ ಕೆಲಸ ಕಾರ್ಯಗಳಿಗೆ ಬರುವ ಜನರಿಗೆ ಅನುಕೂಲವಾಗಲಿದೆ ಎಂದರು.
ಎಲ್ಲ ಗ್ರಾಮ ಪಂಚಾಯಿತಿ ಕಟ್ಟಡಗಳಿಗೆ ಸೌರ ವಿದ್ಯುತ್ ಅಳವಡಿಕೆ ಮಾಡುವುದು ಕಡ್ಡಾಯವಾಗಿದೆ. 15ನೇ ಹಣಕಾಸು ಆಯೋಗದ ಅನುದಾನ ಬಳಕೆ ಮಾಡುವುದರ ಜೊತೆಗೆ ತೆರಿಗೆ ಹಣವನ್ನು ಸಹ ಅಭಿವೃದ್ಧಿಗೆ ಬಳಸಬಹದು ಎಂದು ಹೇಳಿದರು.
ಕೇಂದ್ರ ಸರ್ಕಾರ ನರೇಗಾ ಯೋಜನೆ ಅಡಿಯಲ್ಲಿ ರಾಜ್ಯಕ್ಕೆ 13 ಕೋಟಿ ಮಾನವ ದಿನಗಳ ಹಂಚಿಕೆ ಮಾಡಿತು. ಈ ಪೈಕಿ 10 ಕೋಟಿ ಮಾನವ ದಿನಗಳನ್ನ ರಾಜ್ಯದಲ್ಲಿ ವೇಗವಾಗಿ ಪೂರೈಸಲಾಗಿದೆ. ಗ್ರಾಮೀಣ ಭಾಗದ ಜನತೆಗೆ ನೂರು ದಿನ ಉದ್ಯೋಗ ನೀಡಲಾಗುತ್ತಿತು. ಕಳೆದ ವಾರದ ಕೇಂದ್ರ ಸರ್ಕಾರ ಮಾನವ ದಿನಗಳನ್ನ 150 ದಿನಗಳಿಗೆ ಹೆಚ್ಚಿಸಿದೆ. ಇದರಿಂದ 800 ಕೋಟಿ ಅನುದಾನ ರಾಜ್ಯಕ್ಕೆ ದೊರೆಯಲಿದೆ. ಅಲ್ಲದೆ ನರೇಗಾ ಯೋಜನೆಯಲ್ಲಿ ಪ್ರತಿ ವ್ಯಕ್ತಿಗೆ ದಿನಕ್ಕೆ 249 ರೂ. ಕೂಲಿ ನೀಡಲಾಗುತ್ತಿತು. ಇನ್ನು ಮುಂದೆ ಅದು 279 ರೂ.ಗೆ ಏರಿಕೆಯಾಗಲಿದೆ ಎಂದು ಮಾಹಿತಿ ನೀಡಿದರು.
ಕೇಂದ್ರ ಸರ್ಕಾರ ಏರಿಯಲ್ ಸರ್ವೇ ಮೂಲಕ ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ಯೋಜನೆ ಅಡಿಯಲ್ಲಿ ರಾಜ್ಯಕ್ಕೆ 5,612 ಕಿ.ಮೀ ರಸ್ತೆ ಹಂಚಿಕೆ ಮಾಡಿದೆ. ಈಗಾಗಲೇ ಮೊದಲ ಹಂತವಾಗಿ 3,620 ಕಿ.ಮೀ. ರಸ್ತೆ ಅಭಿವೃದ್ಧಿ ಪಡೆಸಲು ಟೆಂಡರ್ ಅನುಮೋದನೆ ಕೂಡ ನೀಡಲಾಗಿದೆ. ಈ ಪೈಕಿ ರಾಜ್ಯದಲ್ಲಿ 304 ಪ್ಯಾಕೇಜ್‌ಗಳ 284 ಪ್ಯಾಕೇಜ್ ಅಂತಿಮವಾಗಿ ಕಾಮಗಾರಿ ಆರಂಭಗೊಂಡಿದೆ ಎಂದರು.
ಇದರಲ್ಲಿ ಕೇಂದ್ರದ ಶೇ 60 ಅನುದಾನ ಹಾಗೂ ರಾಜ್ಯದ ಶೇ 40 ನೀಡಲಾಗುತ್ತದೆ. ಈ ಪೈಕಿ ಕೇಂದ್ರದಿಂದ 534 ಕೋಟಿ ರೂ. ಬಂದಿದೆ. ರಾಜ್ಯ ಸರ್ಕಾರದ 375 ಕೋಟಿ ರೂ. ಸೇರಿ ಒಟ್ಟು 909 ಕೋಟಿ ಹಣ ಬಿಡುಗಡೆಯಾಗಿದೆ. ಈಗಾಗಲೇ ಕಾಮಗಾರಿ ಆರಂಭಿಸಲಾಗಿದೆ ಎಂದು ಈಶ್ವರಪ್ಪ ತಿಳಿಸಿದರು.
ಗೊಬ್ಬರ ತಯಾರಿಸುವ 'ಭೂ ಸಿರಿ', ಮಣ್ಣು ಪರೀಕ್ಷಿಸುವ 'ಭೂ ಮಿತ್ರ' ಯಂತ್ರಗಳ ಲೋಕಾರ್ಪಣೆ
2ನೇ ಹಂತದಲ್ಲಿ ಉಳಿದ 2,063 ಕಿ.ಮೀ ರಸ್ತೆ ಅಭಿವೃದ್ಧಿ ಕೇಂದ್ರ ಸರ್ಕಾರ ಈ ತಿಂಗಳ ಅಂತ್ಯದೊಳಗೆ ಅನುಮೋದನೆ ನೀಡಲಿದೆ. ಪ್ರವಾಹದಿಂದಾಗಿ ರಾಜ್ಯದಲ್ಲಿ ಗ್ರಾಮೀಣ ಭಾಗದ ಹದಗೆಟ್ಟ ರಸ್ತೆ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ 1,200 ಕೋಟಿ ರೂ. ವಿಶೇಷ ಅನುದಾನ ಬಿಡುಗಡೆ ಮಾಡಿದ್ದು, ಕಾಮಗಾರಿ ಆರಂಭಗೊಂಡಿದೆ ಎಂದರು.
ಉದ್ಯೋಗ ಖಾಯಂಗೊಳಿಸುವಂತೆ ಸಾರಿಗೆ ನೌಕರರು ಪ್ರತಿಭಟನೆ ನಡೆಸುತ್ತಿರುವ ಕುರಿತು ಮಾತನಾಡಿದ ಈಶ್ವರಪ್ಪ, ಸರ್ಕಾರಿ ನೌಕರರಿಗೆ ಶೇ 70ರಷ್ಟು ಅನುದಾನ ಸಂಬಳದ ರೂಪದಲ್ಲಿ ನೀಡಲಾಗುತ್ತಿದೆ. ಎಲ್ಲ ಕಾರ್ಪೊರೇಟ್ ನೌಕರರನ್ನು ಸರ್ಕಾರಿ ನೌಕರರಾಗಿ ಮಾಡಿದರೆ, ಸರ್ಕಾರದ ಬಜೆಟ್ನಿಂದ ಅವರಿಗೆ ಅನುದಾನ ನೀಡಲು ಸಾಲುವುದಿಲ್ಲ. ಕಾರ್ಪೊರೇಷನ್ಗಳಲ್ಲಿ ಉದ್ಯೋಗ ಸೇರಿಸಿಕೊಳ್ಳುವಾಗ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಪ್ರತಿಭಟನೆ ಮಾಡುವುದನ್ನು ನಿಲ್ಲಿಸಿ. ಆರೋಗ್ಯ ಸೌಲಭ್ಯ ವೇತನ ಹೆಚ್ಚಳ ಸೇರಿದಂತೆ ಇತರ ಸೌಲಭ್ಯಗಳ ಕೇಳಿದರೆ ನೀಡಲಾಗುವುದು ಎಂದು ಭರವಸೆ ನೀಡಿದರು.