ಚಿತ್ರದುರ್ಗ : ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿರುವ ಸ್ಥಳದಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿರುವ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿ ಪರ್ಯಾಯವಾಗಿ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದು ಸಂಸದ ಎ.ನಾರಾಯಣಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಈಟಿವಿ ಭಾರತದ ಜೊತೆ ಮಾತನಾಡಿದ ಅವರು, ತಾಲೂಕಿನಲ್ಲಿ ಅಂತರ್ಜಲ ಮಟ್ಟ ಕುಸಿದರೆ, ತಕ್ಷಣವೇ ಭದ್ರಾ ಮೇಲ್ದಂಡೆ ಯೋಜನೆಯ ಇಂಜಿನಿಯರ್‌ಗಳ ಬಳಿ ಚರ್ಚೆಸಿ ಪರ್ಯಾಯವಾಗಿ ಅನುಕೂಲಕ್ಕೆ ಒತ್ತು ನೀಡುತ್ತೇವೆ. ರೈತರಿಗೆ ಪರ್ಯಾಯ ನೀರು ಒದಗಿಸುವ ಕ್ರಮಕ್ಕೆ ಮುಂದಾಗುತ್ತೇವೆ ಎಂದು ಸಂಸದ ನಾರಾಯಣಸ್ವಾಮಿ ಭರವಸೆ ನೀಡಿದ್ದಾರೆ.
ಇದಕ್ಕೂ ಮೊದಲು ಈಟಿವಿ ಭಾರತ ‘ಚಿತ್ರದುರ್ಗ ಜಿಲ್ಲೆಯ ನೀರಾವರಿಗೆ ಕಂಟಕವಾಯ್ತಾ ಭದ್ರಾ ಮೇಲ್ದಂಡೆ ಕಾಲುವೆ ಕಾಮಗಾರಿ?’ ಎಂಬ ಶೀರ್ಷಿಕೆಯಡಿ ಈ ಕುರಿತು ಸುದ್ದಿ ಪ್ರಕಟಿಸಿತ್ತು. ಈಟಿವಿ ಭಾರತ ವರದಿ ಬಿತ್ತರಿಸಿದ ಕೆಲವೇ ಗಂಟೆಗಳಲ್ಲಿ ಪ್ರತಿಕ್ರಿಯಿಸಿದ ಸಂಸದರು, ಹೊಸದುರ್ಗ ತಾಲೂಕಿನ ಮಲ್ಲಪ್ಪನಹಳ್ಳಿ, ಗೂಳಿಹಟ್ಟಿ ಸೇರಿ ಸುತ್ತಮುತ್ತಲಿನ ಗ್ರಾಮಗಳ ಕಾಮಗಾರಿ ನಡೆಯುವ ಸ್ಥಳಕ್ಕೆ ಖುದ್ದಾಗಿ ತೆರಳಿ ಪರಿಶೀಲಿಸುತ್ತೇವೆ ಎಂದರು.
ಚಳ್ಳಕೆರೆ ಭಾಗಕ್ಕೆ ಕುಡಿಯುವ ನೀರಿಗಾಗಿ ಪ್ರತ್ಯೇಕ ಪೈಪ್‌ಲೈನ್ ಮೂಲಕ ನೀರು ಒದಗಿಸಿದಂತೆ, ಹೊಸದುರ್ಗ ತಾಲೂಕಿಗೆ ಪ್ರತ್ಯೇಕ ಪೈಪ್‌ಲೈನ್ ಮೂಲಕ ಆ ಭಾಗದ ಜನರಿಗೆ ಕುಡಿಯುವ ನೀರು ಒದಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಅಲ್ಲದೆ ಅಂತರ್ಜಲ ಕುಸಿಯುತ್ತಿರುವ ಭಾಗಕ್ಕೆ ಕೆರೆ ತುಂಬಿಸುವ ಭರವಸೆಯನ್ನ ಸಂಸದ ನಾರಾಯಣಸ್ವಾಮಿ ನೀಡಿದರು.
ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಮನ್ನಣೆ ನೀಡುವ ಕುರಿತು ರಾಜ್ಯದಿಂದ ಕೇಂದ್ರಕ್ಕೆ ಪ್ರಸ್ತಾವನೆ ಈಗಾಗಲೇ ತಲುಪಿದೆ. ನಾನು ಕೂಡ ಸಿಎಂ ಬಿಎಸ್ವೈ ಜೊತೆಗೆ ಚರ್ಚೆ ಮಾಡಿದ್ದೇನೆ. ರಾಷ್ಟ್ರೀಯ ಮನ್ನಣೆ ನೀಡಲು ಸಂಬಂಧಿಸಿದ ಕೇಂದ್ರ ಇಲಾಖೆಗಳು ಈಗಾಗಲೇ ಒಪ್ಪಿಗೆ ಸೂಚಿಸಿವೆ.
ಇನ್ನು, ಕೆಲವೇ ದಿನಗಳಲ್ಲಿ ಬಯಲು ಸೀಮೆಯ ನಾಡಿನ ಮಹತ್ವಕಾಂಕ್ಷೆ ನೀರಾವರಿ ಯೋಜನೆ ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಯೋಜನೆ ಎಂದು ಕ್ಲಿಯರೆನ್ಸ್ ದೊರೆಯಲಿದೆ ಎಂದು ಸಂಸದರು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಬೆಳಗಾವಿ -ಜೋಧಪುರ ನೇರ ವಿಮಾನ ಸೇವೆ ನಾಳೆಯಿಂದ ಪ್ರಾರಂಭ