ಚಿತ್ರದುರ್ಗ: ಸಿಎಂ ಕುರ್ಚಿಗೆ ಹಾರಬೇಕು ಎಂದು ಸಿದ್ದರಾಮಯ್ಯ ಅನ್ಕೊಂಡಿದ್ದಾರೆ. ಆದ್ರೆ ಅವ್ರ ಕಾಲನ್ನ ಡಿಕೆಶಿ ಎಳೆಯುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ರಾಮುಲು ಲೇವಡಿ ಮಾಡಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಕುರ್ಚಿಗಾಗಿ ಎಲ್ಲರೂ ಮ್ಯೂಸಿಕಲ್ ಚೇರ್ ನಡೆಸಿದ್ದಾರೆ. ಸಿದ್ದರಾಮಯ್ಯ, ಡಿಕೆಶಿ ಇಬ್ಬರೂ ಸಿಎಂ ಆಗಬೇಕು ಅಂದುಕೊಂಡಿದ್ದಾರೆ. ರಾಜ್ಯದ ಜನತೆಗಾಗಿ ಅಭಿವೃದ್ಧಿ ಕೆಲಸ ಮಾಡುವವರು ನಾವು, ಆದ್ರೆ ಸಿಎಂ ಕುರ್ಚಿಗಾಗಿ ಕೆಲಸ ಮಾಡುವವರು ಕಾಂಗ್ರೆಸ್ ಪಕ್ಷದ ನಾಯಕರು. ಅವರಿಗೂ ನಮಗೂ ಬಹಳ ವ್ಯತ್ಯಾಸವಿದೆ. ವಿರೋಧ ಪಕ್ಷದವರಿಗೆ ಮಾಡಲು ಕೆಲಸವಿಲ್ಲ, ಅದ್ಕೆ ಸಿಎಂ ಕುರ್ಚಿ ಮೇಲೆ ಕಣ್ಣು ಹಾಕಿಕೊಂಡು ಕೂತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇನ್ನು ಸಿದ್ದರಾಮಯ್ಯ ಅಹಿಂದ ಹೋರಾಟದ ವಿಚಾರವಾಗಿ ಮಾತನಾಡಿದ ಸಚಿವ ಶ್ರೀರಾಮುಲು, ಅಹಿಂದ ಹೆಸರಿನಲ್ಲಿ ಸಿದ್ದರಾಮಯ್ಯ ರಾಜ್ಯದ ಜನರಿಗೆ ಮೋಸ ಮಾಡಿದ್ದಾರೆ. ಸಿಎಂ ಆದ್ಮೇಲೆ ಹಿಂದುಳಿದ ಸಮುದಾಯಗಳನ್ನು ಕಡೆಗಣಿಸಿದರು. ಮೊದಲು ಸಿದ್ದರಾಮಯ್ಯನವರಿಗೆ ಅಹಿಂದ ಕುರಿತು ಹುರುಪಿತ್ತು, ಆದ್ರೆ ಹಿಂದುಳಿದ ಜನರಿಗೆ ನ್ಯಾಯ ಕೊಡುವ ಕೆಲಸ ಮಾಡಲಿಲ್ಲ ಎಂದರು.
ಈಗ ರಾಜ್ಯದ ಜನತೆಗೆ ಮಾಜಿ ಸಿಎಂ ಪಾತ್ರ ಅರಿವಾಗಿದೆ. ಅವರ ಪಕ್ಷದಲ್ಲಿ ಸಿದ್ದರಾಮಯ್ಯನವರ ಕಾಲು ಎಳೆಯುವ ಪ್ರಯತ್ನ ಮಾಡಲಾಗುತ್ತಿದೆ. ಮುಂದಿನ ಎಲ್ಲಾ ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಗೆಲುವು ಸಾಧಿಸಲಿದೆ ಎಂದು ಸಚಿವ ರಾಮುಲು ವಿಶ್ವಾಸ ವ್ಯಕ್ತಪಡಿಸಿದರು.