ಚಿತ್ರದುರ್ಗ: ಭಾರತದಲ್ಲಿ ಭ್ರಷ್ಟಾಚಾರ ಹೆಚ್ಚಲು ಹಾಗೂ ದೇಶ ಹಿಂದುಳಿಯಲು ಕಾಂಗ್ರೆಸ್ ಪಕ್ಷ ಕಾರಣವೆಂದು ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಅವರು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.
ನಗರದ ಹೊರವಲಯದಲ್ಲಿ ಶನಿವಾರ ನೂತನ ಪ್ರವಾಸಿ ಮಂದಿರ ಉದ್ಘಾಟನೆಗೂ ಮುನ್ನ ಮಾತನಾಡಿದ ಅವರು, ಈ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಉದ್ಭವಿಸಲು ಕಾಂಗ್ರೆಸ್ ಕಾರಣ. ಅಲ್ಲದೇ ದೇಶದ ಆರ್ಥಿಕ ಸ್ಥಿತಿ ಕುಸಿಯಲು ಕೂಡ ಕಾಂಗ್ರೆಸ್ ಹೊಣೆ ಎಂದು ಆರೋಪಿಸಿದ್ದಾರೆ.
ಇದೇ ವೇಳೆ ಕುಮಾರವ್ಯಾಸರ ನುಡಿ ಉಲ್ಲೇಖಿಸಿ ಸಿದ್ದರಾಮಯ್ಯ ಆರೋಪ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿ, ಬಿಜೆಪಿ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿ ಸಿದ್ದರಾಮಯ್ಯ ಟೀಕಿಸಿದ್ದಾರೆ. ಆದರೆ ಮಹಾತ್ಮ ಗಾಂಧೀಜಿ ಕಾಂಗ್ರೆಸ್ ಪಕ್ಷ ವಿಸರ್ಜಿಸಲು ಹೇಳಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ಭ್ರಷ್ಟರು ಹಾಗೂ ಲೂಟಿಕೋರರಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಕ್ಷ ತೊಲಗಿಸಿ ಎಂದು ಗಾಂಧೀಜಿ ಹೇಳಿದ್ದರು. ಹೀಗಾಗಿ ಕುಮಾರವ್ಯಾಸರ ನುಡಿ ನಮಗೆ ಅನ್ವಯಿಸಲ್ಲ. ನೀವು ಗಾಂಧೀಜಿ ಮಾತು ನೆನಪಿಸಿಕೊಳ್ಳಿ ಎಂದು ಸಿದ್ದರಾಮಯ್ಯಗೆ ಟಾಂಗ್ ನೀಡಿದ್ದಾರೆ.
ಇದನ್ನೂ ಓದಿ: ಆನೇಕಲ್ನಲ್ಲಿ Rev Party ಮೇಲೆ ಪೊಲೀಸರ ದಾಳಿ: 12 ಮಂದಿ ಯುವಕರು ಅರೆಸ್ಟ್
2023ಕ್ಕೆ ನಮ್ಮ ಮನೆ ಬಾಗಿಲಿಗೆ ಎಲ್ಲಾ ಪಕ್ಷಗಳು ಬರಬೇಕಾಗುತ್ತದೆ ಎಂದು ದೇವೇಗೌಡರ ಹೇಳಿಕೆ ಕುರಿತಂತೆ ಮಾತನಾಡಿ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ಹಾಗೂ ಮಾಜಿ ಸಿಎಂ ಹೆಚ್‍ಡಿಕೆ ಒಳ್ಳೆಯ ಕೆಲಸ ಮಾಡಿದ್ದಾರೆ. ಆದರೆ ಅವರೊಂದಿಗೆ ಹೋಗುವ ವಿಚಾರವನ್ನು ನಮ್ಮ ರಾಷ್ಟ್ರೀಯ ನಾಯಕರು ಮುಂದೆ ತೀರ್ಮಾನ ಮಾಡುತ್ತಾರೆ. ಕಾಂಗ್ರೆಸ್ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರದಂತೆ ತಡೆಯುವ ಸಂದರ್ಭ ಬಂದರೆ ದೇವೇಗೌಡರನ್ನು ಕೇಳುವುದರಲ್ಲಿ ತಪ್ಪಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.