ಚಿತ್ರದುರ್ಗ : ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಔರಾದ್ ಮತಕ್ಷೇತ್ರದಿಂದ ಸತತ ಮೂರು ಬಾರಿ ಗೆದ್ದಿದ್ದಾರೆ ಎಂದು ಮಾಜಿ ಸಚಿವ ಹೆಚ್ ಆಂಜನೇಯ ಗಂಭೀರ ಆರೋಪ ಮಾಡಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು, ಸಚಿವ ಪ್ರಭು ಚೌಹಾಣ್ ಮೂಲತಃ ಮಹಾರಾಷ್ಟ್ರದವರು. ಅಲ್ಲಿ ಲಂಬಾಣಿ ಪರಿಶಿಷ್ಟ ಪಂಗಡಕ್ಕೆ ಸೇರಿದವರು ಔರಾದ್ ಕ್ಷೇತ್ರಕ್ಕೆ ಬಂದು ಪರಿಶಿಷ್ಟ ಜಾತಿಯೊಳಗೆ ಬರುವ ಲಂಬಾಣಿ ಸಮುದಾಯಕ್ಕೆ ಸೇರಿದವನೆಂದು ನಕಲಿ ಜಾತಿ ಪ್ರಮಾಣ ಪತ್ರ ಪಡೆದು ಮೂಲ ಲಂಬಾಣಿಗರಿಗೆ ಮೋಸ ಮಾಡಿದ್ದಾರೆ ಎಂದು ಆರೋಪ ಮಾಡಿದರು.
ಔರಾದ್ ಕ್ಷೇತ್ರದ ಪರಾಜಿತ ಕೈ ಅಭ್ಯರ್ಥಿ ವಿಜಯ್ ಕುಮಾರ್ ಇದರ ಬಗ್ಗೆ ಧ್ವನಿ ಎತ್ತಿ ಕಾನೂನು ಹೋರಾಟ ಮಾಡಿದ ಬಳಿಕ ಹೈಕೋರ್ಟ್, ಸಮಾಜ ಕಲ್ಯಾಣ ಇಲಾಖೆಯಿಂದ ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ತನಿಖೆ ನಡೆಸುವಂತೆ ನಿರ್ದೇಶನ ಜಾರಿಯಾಯಿತು. ಈ ಹಿನ್ನೆಲೆ ಜಿಲ್ಲಾಧಿಕಾರಿ ಮಹದೇವ ಎಂಬುವರು ಸಚಿವ ಪ್ರಭು ಚೌಹಣ್ ಅವರನ್ನು ವಿಚಾರಣೆಗೊಳಗಾಗುವಂತೆ ನೋಟಿಸ್ ನೀಡಿದ್ದರು. ಹಾಗಾಗಿ, ಸರ್ಕಾರದ ಮೇಲೆ ಪ್ರಭಾವ ಬೀರಿ ಜಿಲ್ಲಾಧಿಕಾರಿಯನ್ನೇ ವರ್ಗಾವಣೆ ಮಾಡಿದ್ದಾರೆಂದು ಆರೋಪಿಸಿದರು.
ಇದೀಗ ಮೂರ್ನಾಲ್ಕು ತಿಂಗಳ ಹಿಂದೆ ಬಂದಿರುವ ನೂತನ ಜಿಲ್ಲಾಧಿಕಾರಿ ನೋಟಿಸ್ ಕೊಡುವ ಗೋಜಿಗೆ ಹೋಗಿಲ್ಲ. ಇದರಿಂದ ಸಂಪುಟದಲ್ಲಿರುವ ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಮೂಲತಃ ಮಹಾರಾಷ್ಟ್ರದವರಾಗಿದ್ದರಿಂದ ನಕಲಿ ಜಾತಿ ಪ್ರಮಾಣ ಪತ್ರ ಸೃಷ್ಟಿಸಿ ಸಚಿವರಾಗಿದ್ದಾರೆ. ಕೂಡಲೇ ಅವರನ್ನು ಸಂಪುಟದಿಂದ ಕೈಬಿಡಬೇಕೆಂದು ಸಿಎಂ ಬಿಎಸ್ವೈ ಅವರಿಗೆ ಮನವಿ ಮಾಡಿದರು.