ಚಿತ್ರದುರ್ಗ : ಗರ್ಭಿಣಿ ಸೇರಿದಂತೆ ಮೂವರನ್ನು ಬಲಿ ಪಡೆದಿದ್ದ ರಸ್ತೆಯಲ್ಲಿ ಇದೀಗ ಮತ್ತೆ ಮೈನಿಂಗ್ ಲಾರಿಗಳ ಸದ್ದು ಕೇಳಿಬರುತ್ತಿದೆ.
ನ್ಯಾಯಾಲಯದ ನಿಯಮಗಳನ್ನು ಗಾಳಿಗೆ ತೂರಿ ಲಾರಿಗಳು ಮತ್ತೆ ಸಂಚಾರ ಆರಂಭಿಸಿವೆ. ಅಜಾಗರೂಕತೆಯಿಂದ ಸಂಚರಿಸುತ್ತಿರುವ ಲಾರಿಗಳು ಮತ್ತು ಗೋವಾ ಮೂಲದ ಗಣಿ ಕಂಪನಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಸಂಪೂರ್ಣವಾಗಿ ಗಣಿ ಚಟುವಟಿಕೆ ಸ್ಥಗಿತಗೊಳಿಸುವಂತೆ ಒತ್ತಾಯಿಸಿದ್ದಾರೆ.
ಜಿಲ್ಲೆಯ ಭೀಮಸಮುದ್ರ ವ್ಯಾಪ್ತಿಯಲ್ಲಿ ಗೋವಾ ಮೂಲದ ಖಾಸಗಿ ಕಂಪನಿ ದಶಕಗಳ ಹಿಂದಿನಿಂದಲೂ ಗಣಿಗಾರಿಕೆ ಮಾಡುತ್ತಿದೆ. ಅದಿರು ಸಾಗಿಸುವ ಸಲುವಾಗಿ ಗಣಿಯಿಂದ ನೇರವಾಗಿ ಬಳ್ಳಾರಿ ಜಿಲ್ಲೆ ಜಿಂದಾಲ್‌ಗೆ ರೈಲು ಹಳಿಯನ್ನು ಹಾಕಿಸಲಾಗಿದೆ. ಆದರೆ ಕೆಲ ಗೋವಾ ಕಂಪನಿಗಳು ಭೀಮಸಮುದ್ರ ಸಮೀಪದ ಗಣಿಯಿಂದ ಕಬ್ಬಿಣದ ಅದಿರನ್ನು ಲಾರಿಗಳ ಮೂಲಕ ಬೇರೆ ಬೇರೆ ಕಂಪನಿಗಳಿಗೆ ಸಾಗಿಸುತ್ತಿವೆ. ಅದಿರು ತುಂಬಿದ ಲಾರಿಗಳ ಅಜಾಗರೂಕತೆಯ ಸಂಚಾರದಿಂದ ಆ ಭಾಗದ ಸುತ್ತಮುತ್ತಲ ಹತ್ತಾರು ಗ್ರಾಮಗಳ ಜನರಿಗೆ ತೊಂದರೆಯಾಗುತ್ತಿದ್ದು, ಮೈನಿಂಗ್ ಲಾರಿ ಅಪಘಾತಕ್ಕೆ ಸಿಲುಕಿ ಮಹಿಳೆಯರು, ಮಕ್ಕಳು, ವೃದ್ಧರು ಸೇರಿದಂತೆ ಸಾಕಷ್ಟು ಜನರು ಮೃತಪಟ್ಟಿದ್ದಾರೆ.
ಕಳೆದ ತಿಂಗಳು ಮೈನಿಂಗ್ ಲಾರಿಗೆ ಸಿಲುಕಿ 9 ತಿಂಗಳ ಗರ್ಭಿಣಿ ಸೇರಿದಂತೆ ಮೂವರು ಮೃತಪಟ್ಟಿದ್ದರು. ಈ ವೇಳೆ ರೊಚ್ಚಿಗೆದ್ದ ಗ್ರಾಮಸ್ಥರು ರಸ್ತೆ ತಡೆ ನಡೆಸಿದ ಪರಿಣಾಮ ಸುಮಾರು 80 ಲಕ್ಷ ರೂ. ದಂಡ ತೆತ್ತಿದ್ದ ಗಣಿ ಮಾಲಿಕರು, ತಾತ್ಕಾಲಿಕವಾಗಿ ಲಾರಿ ಸಂಚಾರ ಸ್ಥಗಿತಗೊಳಿಸಿದ್ದರು. ಮತ್ತೆ ಈಗ ಲಾರಿಗಳ ಮೂಲಕ ಅದಿರು ಸಾಗಾಟ ಮುಂದುವರೆಸಿವೆ. ಇದರಿಂದ ಆಕ್ರೋಶಗೊಂಡ ಸಾರ್ವಜನಿಕರ ಪ್ರತಿಭಟನೆಗೆ ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ್ ಅವರ ಪತ್ನಿ ಬೆಂಬಲ ಸೂಚಿಸಿದ್ದಾರೆ.