ಚಿತ್ರದುರ್ಗ: ಕೋಟೆನಾಡಿನ ಬಹುದಿನಗಳ ಕನಸು ಇದೀಗ ನನಸಾಗಿದೆ. ಹೆಚ್ಚು ಶ್ರಮಿಕರು ಜೀವನ ನಡೆಸುತ್ತಿರುವ ಜಿಲ್ಲೆಗೆ ಕೊನೆಗೂ ಮೆಡಿಕಲ್ ಕಾಲೇಜು ಮಂಜೂರಾಗಿದೆ. ಬಹುದಿನಗಳ ಹೋರಟ ಫಲವಾಗಿ ಮೆಡಿಕಲ್ ಕಾಲೇಜು ಸಿಕ್ಕಿದ್ದು, ಹೋರಾಟಗಾರರ ಮೊಗದಲ್ಲಿ ಮಂದಹಾಸ ಮೂಡಿಸಿಡಿದೆ.
2013ರಲ್ಲಿ ಸಿಎಂ ಆಗಿದ್ದ ಯಡಿಯೂರಪ್ಪನವರು ಚಿತ್ರದುರ್ಗಕ್ಕೆ ಮಂಜೂರು ಮಾಡಿದ್ದ ಮೆಡಿಕಲ್ ಕಾಲೇಜು ಸ್ಥಳೀಯ ರಾಜಕೀಯ ನಾಯಕರ ಹಗ್ಗಜಗ್ಗಾಟದ ಕಾರಣ ಚಿಕ್ಕಬಳ್ಳಾಪುರ ಜಿಲ್ಲೆಯ ಪಾಲಾಗಿತ್ತು. ಬಳಿಕ ಸಾಕಷ್ಟು ಬಾರಿ ಚಿತ್ರದುರ್ಗ ಜನಪ್ರತಿನಿಧಿಗಳ ನಿಯೋಗ ಸಿಎಂ ಭೇಟಿ ಮಾಡಿ ಜಿಲ್ಲೆಗೆ ನೀಡುವಂತೆ ಮನವಿ ಮಾಡಿತ್ತು. ಇದರ ಫಲವಾಗಿ ಈಗ ಜಿಲ್ಲೆಗೆ ಮೆಡಿಕಲ್ ಕಾಲೇಜು ಮಂಜೂರಾಗಿದ್ದು, ಮೊದಲ ಹಂತದಲ್ಲಿ 50 ಕೋಟಿ ರೂ. ಹಣ ಬಿಡುಗಡೆಯಾಗಿದೆ.
ಜಿಲ್ಲಾಸ್ಪತ್ರೆಯ ಬಳಿ ಒಟ್ಟು 23 ಎಕರೆಯಲ್ಲಿ ಭವ್ಯವಾದ ಮೆಡಿಕಲ್ ಕಾಲೇಜು ತಲೆ ಎತ್ತಲಿದ್ದು, ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯ ನಕ್ಷೆ ನೋಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಸುಸಜ್ಜಿದ ಆಸ್ಪತ್ರೆ ಇಲ್ಲದೆ ನೆರೆಯ ಆಂಧ್ರ ಹಾಗೂ ದಾವಣಗೆರೆಗೆ ಓಡಾಡಬೇಕಿದ್ದ ಜಿಲ್ಲೆಯ ಜನರಿಗೆ ಮೆಡಿಕಲ್ ಕಾಲೇಜು ಆರಂಭವಾಗುತ್ತಿರುವುದರಿಂದ ಎಲ್ಲಿಲ್ಲದ ಸಂತೋಷ ತರಿಸಿದೆ.
ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಒಟ್ಟು 500 ಕೋಟಿ ಹಣ ವ್ಯಯ ಆಗಲಿದ್ದು, ಸಿಎಂ ಮೊದಲ ಹಂತವಾಗಿ 50 ಕೋಟಿ ರೂ. ಹಣ ಮಂಜೂರು ಮಾಡಿದ್ದಾರೆ. ಉಳಿದ ಹಣವನ್ನು ಹಂತ ಹಂತವಾಗಿ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ನಿರ್ಮಾಣ ಆಗುವ ಮೆಡಿಕಲ್ ಕಾಲೇಜಿನಲ್ಲಿ ನರ್ಸಿಂಗ್ ಹಾಗೂ ಪ್ಯಾರಾ ಮೆಡಿಕಲ್ ಕಾಲೇಜುಗಳನ್ನು ಆರಂಭಿಸಲು ಸರ್ಕಾರ ಚಿಂತನೆ ನಡೆಸಿದೆ. ಸಾಕಷ್ಟು ಹಗ್ಗಜಗ್ಗಾಟದ ಬಳಿಕ 23 ಎಕರೆಯಲ್ಲಿ ಮುಂದಿನ ಎರಡೂವರೆ ವರ್ಷಗಳಲ್ಲಿ ಮೆಡಿಕಲ್ ಕಾಲೇಜು ತಲೆ ಎತ್ತಲಿದೆ ಎನ್ನುತ್ತಾರೆ ಜಿಲ್ಲಾ ಸರ್ಜನ್ ಡಾ. ಬಸವರಾಜ್.