ಚಿತ್ರದುರ್ಗ : ಜಿಲ್ಲೆಗೆ ವೈದ್ಯಕೀಯ ಕಾಲೇಜು ಮಂಜೂರು ಆದ ಬೆನ್ನಲ್ಲೇ ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಸ್ಥಳ ವೀಕ್ಷಣೆ ಮಾಡಿದರು.
ಚಿತ್ರದುರ್ಗ ನಗರದ ಜಿಲ್ಲಾಸ್ಪತ್ರೆಯ ಹಿಂಭಾಗದಲ್ಲಿರುವ 23 ಎಕರೆ ವಿಶಾಲವಾದ ಪ್ರದೇಶವನ್ನು ವೀಕ್ಷಣೆ ಮಾಡಿದರು. ಬಳಿಕ ಮಾತನಾಡಿದ ಸಚಿವರು, ಕೇಂದ್ರ ಸರ್ಕಾರ ನೀಡುವ ವೈದ್ಯಕೀಯ ಕಾಲೇಜುಗಳ ಪಟ್ಟಿಯಲ್ಲಿ ಚಿತ್ರದುರ್ಗ ಇರಲಿಲ್ಲ, ಆದ್ರೂ ರಾಜ್ಯ ಸರ್ಕಾರದ ಅನುದಾನ ಹಾಗೂ ಜಿಲ್ಲಾ ಖನಿಜ ನಿಧಿ ಬಳಸಿಕೊಂಡು ಕಾಮಗಾರಿ ನಡೆಸಲು ಎಲ್ಲಾ ಸಿದ್ಧತೆ ನಡೆಸಲಾಗಿದೆ.
ಎರಡೂವರೆ ವರ್ಷದಲ್ಲಿ ಈ ಮೆಡಿಕಲ್ ಕಾಲೇಜು ಕಾಮಗಾರಿ ಮುಗಿಯಬೇಕಿದ್ದು, ಕಾಮಗಾರಿ ಮುಗಿದ ಬಳಿಕ ಬರುವ ಮಾರ್ಚ್ -ಏಪ್ರಿಲ್ ತಿಂಗಳಿನಲ್ಲಿ ಕೋರ್ಸ್ ಆರಂಭಿಸಲು ಚಿಂತನೆ ನಡೆದಿದೆ ಎಂದು ತಿಳಿಸಿದ್ರು. ಕಾಲೇಜು ಮುಂಜೂರು ಮಾಡಿರುವುದರ ಜೊತೆಗೆ ನರ್ಸಿಂಗ್ ಹಾಗೂ ಪ್ಯಾರಾ ಮೆಡಿಕಲ್ ಕಾಲೇಜು ಆರಂಭಿಸಲು ಕಾಯಕಲ್ಪ ಹಾಕಿಕೊಳ್ಳಲಾಗಿದೆ.
ಚಿತ್ರದುರ್ಗದಿಂದ ಆಗಮಿಸಿದ್ದ ನಿಯೋಗಕ್ಕೆ ಸ್ಪಂದಿಸಿರುವ ಸಿಎಂ ಯಡಿಯೂರಪ್ಪನವರು ಮೊದಲ ಹಂತದಲ್ಲಿ ₹50 ಕೋಟಿ ಹಣವನ್ನು ಬಿಡುಗಡೆ ಮಾಡಿದ್ದಾರೆ ಎಂದು ಹೇಳಿದ್ರು. ಕೊರೊನಾ ವ್ಯಾಕ್ಸಿನ್ ಕುರಿತು ಪ್ರತಿಕ್ರಿಯಿಸಿದ ಸಚಿವ ಡಾ.ಕೆ. ಸುಧಾಕರ್, ಕೊರೊನಾ ವ್ಯಾಕ್ಸಿನ್ ರಿಸರ್ಚ್ ನಡೆಯುತ್ತಿದ್ದು, ಮೂರನೇ ಹಂತದ ಪ್ರಯೋಗವನ್ನು ನಡೆಸಲಾಗುತ್ತಿದೆ.
ಶೇ.90 ರಷ್ಟು ವ್ಯಾಕ್ಸಿನ್ ಯಶಸ್ವಿಯಾಗಿದೆ ಎಂದು ಸಂಸ್ಥೆಗಳು ಮಾಹಿತಿ ನೀಡಿವೆ. ಹೀಗಾಗಿ ಮುಂದಿನ ವರ್ಷದ ಜನವರಿ, ಫೆಬ್ರವರಿ ಅಥವಾ ಮಾರ್ಚ್ ತಿಂಗಳಿನಲ್ಲಿ ವ್ಯಾಕ್ಸಿನ್ ಬರಲಿದೆ ಎಂದ್ರು.