ಚಿತ್ರದುರ್ಗ: ದೇಶಾದ್ಯಂತ ಮಹಾಮಾರಿ ಕೊರೊನಾ ವೈರಸ್ ಹಾವಳಿ ಜೋರಾಗಿದ್ದು, ಸೋಂಕಿಗೊಳಗಾಗಿ ಪ್ರತಿದಿನ ಸಾವಿರಾರು ಜನರು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದರ ಮಧ್ಯೆ ಅನೇಕರು ಮಹಾಮಾರಿಗೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.
ಸದ್ಯ ಅಂತಹದೊಂದು ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ರಂಗನಾಥಪುರದಲ್ಲಿ ನಡೆದಿದೆ. ರಂಗನಾಥಪುರದ ನಿವಾಸಿ ರಾಜು(32) ಆತ್ಮಹತ್ಯೆಗೆ ಶರಣಾಗಿದ್ದಾರೆ. ಇತನ ಪತ್ನಿ ರಶ್ಮಿಗೆ ಇದೇ ತಿಂಗಳು ಮೇ 27ರಂದು ಕೊರೊನಾ ಸೋಂಕು ದೃಢಗೊಂಡಿತ್ತು. ರಾಜು ಕೂಡ ಕೋವಿಡ್ ಟೆಸ್ಟ್ ಮಾಡಿಸಿದ್ದನು. ಆದರೆ ಆತನ ವರದಿ ನೆಗೆಟಿವ್ ಬಂದಿತ್ತು. ಆದರೆ ಪತ್ನಿಗೆ ಕೊರೊನಾ ಸೋಂಕು ಇರುವುದರಿಂದ ಗಾಬರಿಗೊಂಡಿದ್ದ ಆತ ಖಿನ್ನತೆಗೊಳಗಾಗಿದ್ದನು. ಇದೇ ಕಾರಣದಿಂದಾಗಿ ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಇದನ್ನೂ ಓದಿ: ಕೋವಿಡ್ನಿಂದ ಮೃತಪಟ್ಟವರ ಕುಟುಂಬಗಳಿಗೆ ಕೇಂದ್ರ ನೆರವಿನ ಹಸ್ತ..
ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.