ಚಿತ್ರದುರ್ಗ: ಬೆಳ್ಳಂಬೆಳಗ್ಗೆ ಮಹಿಳೆಯೊಬ್ಬರ ಮೇಲೆ ಚಿರತೆ ದಾಳಿ ಮಾಡಿರುವ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನ ಕುರುಬರಹಳ್ಳಿಯಲ್ಲಿ ನಡೆದಿದ್ದು, ಮಹಿಳೆ ಅಪಾಯದಿಂದ ಪಾರಾಗಿದ್ದಾರೆ.
ಮಂಜಿಬಾಯಿ (45) ಗಾಯಗೊಂಡ ಮಹಿಳೆ. ಈಕೆ ಮನೆಯ ಮುಂಭಾಗದಲ್ಲಿ ಮಲಗಿದ್ದಾಗ ಚಿರತೆ ದಾಳಿ ಮಾಡಿದೆ. ಮಂಜಿಬಾಯಿ ಮೇಲೆರಗಿದ ಚಿರತೆ, ಅವರ ಕೈಗಳನ್ನು ಕಚ್ಚಿ ಮನೆಯ ಹಿಂಭಾಗದ ತಿಪ್ಪೆಯ ಕಡೆ ಎಳೆದುಕೊಂಡು ಹೋಗಿದೆ. ಇದನ್ನು ನೋಡಿದ ಮಂಜಿಬಾಯಿಯವರ ಸೊಸೆ ಜೋರಾಗಿ ಕಿರುಚಾಡಿದ್ದಾರೆ. ಈ ವೇಳೆ ಚಿರತೆ ಮಂಜಿಬಾಯಿಯವರನ್ನು ಅಲ್ಲಿಯೇ ಬಿಟ್ಟು, ಪಕ್ಕದ ಗಣೇಶ ಎಂಬುವರ ಮನೆ ಕಡೆ ನುಗ್ಗಿದೆ. ಆಗ ಅಲ್ಲಿದ್ದವರು ಜೋರಾಗಿ ಚೀರಿ ಕಲ್ಲು ಬೀಸಿದ್ದರಿಂದ ಮನೆಯ ಪಕ್ಕದ ಬೇಲಿ ಮೂಲಕ ಓಡಿಹೋಗಿದೆ.
ವಿಷಯ ತಿಳಿದ ತಕ್ಷಣವೇ ಸ್ಥಳಕ್ಕೆ ವಲಯ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದು, ಗಾಯಗೊಂಡ ಮಹಿಳೆಯನ್ನು ಹಿರಿಯೂರಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿರತೆ ದಾಳಿಯಿಂದ ಊರಿನ ಜನರು ಭಯಭೀತರಾಗಿದ್ದು, ಅರಣ್ಯ ಅಧಿಕಾರಿಗಳು ಧೈರ್ಯ ತುಂಬಿ ಚಿರತೆ ಹಿಡಿಯಲು ಬೋನ್ ಇಡಲಾಗುವುದು ಎಂದು ಹೇಳಿದ್ದಾರೆ.
ಓದಿ : ಮಹಿಳಾ ಎಎಸ್ಐ ಮೇಲೆ ಹಲ್ಲೆ ಮಾಡಿ ಪರಾರಿಗೆ ಯತ್ನ: ಥಳಿಸಿ ಪೊಲೀಸರಿಗೊಪ್ಪಿಸಿದ ಸ್ಥಳೀಯರು