ಚಿತ್ರದುರ್ಗ: ಕೊರೊನಾ 2ನೇ ಅಲೆಯಿಂದ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ನಗರದ ತರಕಾರಿ ವ್ಯಾಪಾರಿಗಳು ತತ್ತರಿಸಿ ಹೋಗಿದ್ದಾರೆ. ಪ್ರತಿನಿತ್ಯ ಚಳ್ಳಕೆರೆ ನಗರದ ಬಿಎಂಜಿಹೆಚ್ಎಸ್ ಶಾಲಾ ಆವರಣದಲ್ಲಿ ತರಕಾರಿ ಮಾರಟಕ್ಕೆ ಅನುಮತಿ ನೀಡಲಾಗಿದೆ. ಆದರೆ ಗ್ರಾಹಕರಿಲ್ಲದೆ ವ್ಯಾಪಾರಸ್ಥರು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವ ಪರಿಸ್ಥಿತಿ ಎದುರಾಗಿದೆ.
ಕಳೆದರೆಡು ದಿನಗಳಿಂದ ಅಲ್ಪ ಸ್ವಲ್ಪ ಪ್ರಮಾಣದಲ್ಲಿ ಗ್ರಾಹಕರು ತರಕಾರಿಗಳನ್ನು ಕೊಳ್ಳಲು ಬರುತ್ತಿದ್ದರು. ಆದರೆ ಸರ್ಕಾರ ಜಾರಿ ಮಾಡಿರುವ ಟಫ್ ರೂಲ್ಸ್ಗಳಿಂದಾಗಿ ಗ್ರಾಹಕರು ಮಾರುಕಟ್ಟೆಗೆ ಬರುತ್ತಿಲ್ಲ. ಕೊಟ್ಟಿರುವ ಸಮಯದಲ್ಲಿ ನಾವು ಸಾಲ ಮಾಡಿ ರೈತರಿಂದ ತರಕಾರಿಯನ್ನು ಕೊಂಡು ಮಾರಟ ಮಾಡುತ್ತಿದ್ದೇವೆ. ಇದೇ ರೀತಿ ಪರಿಸ್ಥಿತಿ ಎದುರಾದರೆ ಹೊಟ್ಟೆ ಮೇಲೆ ತಣ್ಣೀರು ಬಟ್ಟೆಯೇ ಗತಿ ಎಂದು ವ್ಯಾಪಾರಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಮೊದಲು ಮದುವೆ, ಹೋಟೆಲ್ನವರು ತರಕಾರಿ ಕೊಳ್ಳುತ್ತಿದ್ದರು. ಆದರೆ ಇದೀಗ ಹೋಟೆಲ್ಗಳು ಸಂಪೂರ್ಣ ಬಂದ್ ಆಗಿದ್ದು, ಮದುವೆಗಳು ಸಹ ಸರ್ಕಾರದ ನಿಯಮಾನುಸಾರ ನಡೆಯುತ್ತಿವೆ. ಹೋಲ್ ಸೇಲ್ ತೆಗೆದುಕೊಂಡು ಗಾಡಿಯಲ್ಲಿ ವ್ಯಾಪಾರ ಮಾಡ್ತಾ ಇದ್ರು ಅದಕ್ಕೂ ಬ್ರೇಕ್ ಬಿದ್ದಿದೆ. ಹೀಗೆ ಆದ್ರೆ ನಾವು ವ್ಯಾಪಾರ ಮಾಡುವುದಾದರೂ ಹೇಗೆ? ಸರ್ಕಾರ ನಮ್ಮ ಸಮಸ್ಯೆಗಳನ್ನು ಅರಿಯದೆ ಕರ್ಫ್ಯೂ ಜಾರಿ ಮಾಡಿರುವುದು ಎಷ್ಟು ಸರಿ? ಎಂದು ವ್ಯಾಪಾರಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.