ಚಿತ್ರದುರ್ಗ: ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪನವರ ಕನಸಿನ ಕೂಸಾದ ಭದ್ರಾ ಮೇಲ್ದಂಡೆ ಯೋಜನೆಯು ಸಾಕಾರಗೊಳ್ಳುವ ಲಕ್ಷಣ ಕಾಣುತ್ತಿದೆ. ಭದ್ರಾ ಜಲಾಶಯದ ಹಿನ್ನೀರನ್ನು ಚಿತ್ರದುರ್ಗದ ವಿವಿ ಸಾಗರಕ್ಕೆ ಹರಿಸುವ ಯೋಜನೆ ಇದಾಗಿದ್ದು, ಉಸ್ತುವಾರಿ ಸಚಿವ ವೆಂಕಟರಮಣಪ್ಪ ಇಂದು ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದರು. ಅಲ್ಲದೆ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದರು.

ವಿವಿ ಸಾಗರಕ್ಕೆ ನೀರು ಹರಿಸಲು ಅಜ್ಜಂಪುರ ಬಳಿ ಕೊರೆದಿರುವ ಸುರಂಗ ಮಾರ್ಗವನ್ನು ಪರಿಶೀಲನೆ ನಡೆಸಿ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿ, ವಾಣಿವಿಲಾಸ ಸಾಗರಕ್ಕೆ ನೀರು ಹರಿಸುವುದಾಗಿ ಜನರಿಗೆ ಭರವಸೆ ನೀಡಿದರು.
ಇದೇ ವೇಳೆ ಚಳ್ಳಕೆರೆ ಕೈ ಶಾಸಕರು ಹಾಗೂ ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ ಟಿ.ರಘುಮೂರ್ತಿ, ಚಿತ್ರದುರ್ಗ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಹೊಸದುರ್ಗದ ಮಾಜಿ ಶಾಸಕ ಬಿ.ಜಿ. ಗೋವಿಂದಪ್ಪ, ಮಾಜಿ ಸಚಿವ ಟಿ.ಬಿ.ಜಯಚಂದ್ರ ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿಯನ್ನು ಪರಿಶೀಲನೆ ನಡೆಸಿ ಅಧಿಕಾರಿಗಳೊಂದಿಗೆ ಮಾಹಿತಿ ಕಲೆಹಾಕಿದರು.