ಚಿತ್ರದುರ್ಗ: ಬರಪೀಡಿತ ಜಿಲ್ಲೆ ಚಿತ್ರದುರ್ಗದಲ್ಲಿ ಕಳೆದ ದಿನ ಮಳೆರಾಯ ಭರ್ಜರಿಯಾಗಿ ಕೃಪೆ ತೋರಿದ್ದಾನೆ. ಮಳೆ ಆಗಮನದಿಂದ ಕೆಲ ರೈತರ ಬದುಕು ಸಂತಸಮಯ ಆಗಿದ್ದರೆ, ಇನ್ನು ಕೆಲ ರೈತರ ಬದುಕು ಮೂರಾಬಟ್ಟೆಯಾಗಿದೆ.
ಕಳೆದ ದಿನ ಸುರಿದ ಕುಂಭದ್ರೋಣ ಮಳೆಗೆ ಈರುಳ್ಳಿ ಬೆಳೆದ ಕೆಲ ಜಮೀನುಗಳು ಕೆರೆಯಾಗಿ ಮಾರ್ಪಾಡಾಗಿವೆ. ಮಳೆ ಆರ್ಭಟಕ್ಕೆ ನಾಲ್ಕು ಎಕರೆಯಲ್ಲಿ ಬೆಳೆದಿದ್ದ ಈರುಳ್ಳಿ ನೀರುಪಾಲಾಗಿದ್ದು, ಬೆಳೆ ರಕ್ಷಿಸಿಕೊಳ್ಳಲು ರೈತ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳ್ಳಿರೊಪ್ಪ ಗ್ರಾಮದ ರೈತ ಹೇಮಣ್ಣ ಈರುಳ್ಳಿ ಬೆಳೆ ನಾಶದಿಂದ ಕಂಗಾಲಾಗಿದ್ದಾನೆ. ಹಿರಿಯೂರು ತಾಲ್ಲೂಕಿನ ಕಳ್ಳಿರೊಪ್ಪ ಗ್ರಾಮದ ಹೇಮಣ್ಣ ಎಂಬ ರೈತನ ಜಮೀನಿನಲ್ಲಿ ಈ ಘಟನೆ ನಡೆದಿದ್ದು, ಮಳೆಯಿಂದಾಗಿ ಲಕ್ಷಾಂತರ ರೂಪಾಯಿ ಬಂಡವಾಳ ನಷ್ಟ ಅನುಭವಿಸಿದ್ದಾನೆ. ಪರಿಹಾರ ನೀಡುವಂತೆ ರೈತ ಹೇಮಣ್ಣ ಸರ್ಕಾರಕ್ಕೆ ಒತ್ತಾಯಿಸಿದ್ದಾನೆ.