ಚಿತ್ರದುರ್ಗ: ಕಾಂಗ್ರೆಸ್ ಮತ್ತು ಜೆಡಿಎಸ್ ನೋಡಲು ಬೇರೆ ಪಕ್ಷಗಳಂತೆ ಕಂಡು ಬಂದರೂ, ಎರಡೂ ಪಕ್ಷಗಳು ಒಂದೇ ಆಗಿವೆ. ಉಭಯ ಪಕ್ಷಗಳು ಭ್ರಷ್ಟ, ಪರಿವಾರವಾದಿಯಾಗಿವೆ. ಈ ಪಕ್ಷಗಳು ಸಮಾಜದಲ್ಲಿ ಒಡಕುಗಳನ್ನು ಬಿತ್ತುತ್ತವೆ. ಅವರ ಅಧಿಕಾರದ ಅವಧಿಯಲ್ಲಿ ಅಭಿವೃದ್ಧಿ ನಿಧಾನಗತಿಯಲ್ಲಿತ್ತು. ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ರಚನೆಯಾಗುತ್ತಿದ್ದಂತೆ ಅಭಿವೃದ್ಧಿಗೆ ವೇಗ ಸಿಕ್ಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಚಿತ್ರದುರ್ಗದಲ್ಲಿಂದು ಬಿಜೆಪಿ ಪರ ಚುನಾವಣಾ ಪ್ರಚಾರ ಭಾಷಣ ಮಾಡಿದ ಅವರು, ಚಿತ್ರದುರ್ಗದ ಕೋಟೆಯನ್ನು ಏಳು ಸುತ್ತಿನ ಕೋಟೆ ಎಂದು ಕರೆಯುತ್ತಾರೆ. ಬಿಜೆಪಿ ಸರ್ಕಾರ ಜನತೆಗೆ ಏಳು ಸುತ್ತಿನ ರಕ್ಷಣೆಗಳನ್ನು ನೀಡಿದೆ. ಆವಾಸ್ ಯೋಜನೆ, ಉಚಿತ ಗ್ಯಾಸ್ ಸಂಪರ್ಕ, ಉಚಿತ ಪಡಿತರ, ಉಚಿತ ಆರೋಗ್ಯ, ಜನಧನ್, ಮುದ್ರಾ ಯೋಜನೆ, ಜೀವಜ್ಯೋತಿ, ಅಟಲ್ ಪಿಂಚಣಿ ಯೋಜನೆ, ಸುರಕ್ಷಿತ ಕಾನೂನು ವ್ಯವಸ್ಥೆ ಮತ್ತು ಪ್ರತಿ ಸಮಾಜದ ಹಕ್ಕುಗಳನ್ನು ರಕ್ಷಿಸುವ ಯೋಜನೆಗಳನ್ನು ನೀಡಿದೆ ಎಂದು ತಿಳಿಸಿದರು.
ಎಸ್ಸಿ-ಎಸ್ಟಿ ಸಮುದಾಯಕ್ಕೂ ಡಬಲ್ ಇಂಜಿನ್ ಸರ್ಕಾರದ ಉಪಯೋಗ ಸಿಕ್ಕಿದೆ. ಭದ್ರಾ ಯೋಜನೆಗೆ 5,500 ಕೋಟಿ ರೂ ಅನುದಾನ ನೀಡಿದ್ದೇವೆ. ಕರ್ನಾಟಕದಲ್ಲಿ 9 ಕೈಗಾರಿಕಾ ವಲಯವನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಇವುಗಳ ಪೈಕಿ ಒಂದನ್ನು ಚಿತ್ರದುರ್ಗ ಜಿಲ್ಲೆಯಲ್ಲಿ ಸ್ಥಾಪಿಸಲಾಗುತ್ತಿದೆ. ಇದು ಈ ಜಿಲ್ಲೆಯ ಯುವಜನತೆಗೆ ಹಲವು ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ. ಮೆಡಿಕಲ್, ಎಂಜಿನಿಯರಿಂಗ್ ಶಿಕ್ಷಣದ ಪರೀಕ್ಷೆಯನ್ನು ಸ್ಥಳೀಯ ಭಾಷೆಯಲ್ಲಿ ಬರೆಯಲು ಅವಕಾಶ ಮಾಡಿಕೊಡಲಾಗಿದೆ. ಈ ಮೂಲಕ ಗ್ರಾಮೀಣ ಭಾಗದ ಬಡ ಮಕ್ಕಳಿಗೂ ಎಂಜಿನಿಯರಿಂಗ್ ಹಾಗೂ ಮೆಡಿಕಲ್ ಶಿಕ್ಷಣ ಸಿಗುವಂತೆ ಅನುಕೂಲ ಮಾಡಿದ್ದೇವೆ ಎಂದು ವಿವರಿಸಿದರು.
ಬಿಜೆಪಿ ಅಭಿವೃದ್ಧಿ ಕರ್ನಾಟಕವನ್ನು ಬಯಸುತ್ತಿದೆ. ಆದರೆ, ಕಾಂಗ್ರೆಸ್ ಭವಿಷ್ಯದ ಹಣವನ್ನು ತಿಂದು ತೇಗುವ ಕನಸು ಕಾಣುತ್ತಿದೆ. ನಾಯಕರನ್ನು ನಿಂದಿಸುವ ಹಾಗೂ ಸಮಾಜ ಒಡೆಯುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಹಿಂದುಳಿದ ಹಾಗೂ ಲಿಂಗಾಯತ ಸಮುದಾಯಗಳಿಗೆ ನಿಂದನೆ ಮಾಡುತ್ತಿದೆ. ನನ್ನ ಮೇಲೆ ನಿಂದನೆ ಮಾಡುದರಲ್ಲಿ ಶತಕ ದಾಟುವವರಿದ್ದಾರೆ. ಕಾಂಗ್ರೆಸ್ ಅಂದಿನ ಬಹುದೊಡ್ದ ನಾಯಕರಾದ ನಿಜಲಿಂಗಪ್ಪ ಅವರನ್ನು ಸಹ ಅವಮಾನಿಸದೆ ಬಿಟ್ಟಿರಲಿಲ್ಲ ಎಂದು ಟೀಕಿಸಿದರು.
ಅಧಿಕಾರಕ್ಕಾಗಿ ಕಾಂಗ್ರೆಸ್ ನಾಯಕರು ಸುಳ್ಳು ಭರವಸೆ ನೀಡುತ್ತಾರೆ. ಕಾಂಗ್ರೆಸ್‌ನ ಗ್ಯಾರಂಟಿಗಳಿಂದ ಜನರ ಹಾಗೂ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ. ಕಾಂಗ್ರೆಸ್‌ನ ಗ್ಯಾರಂಟಿಗಳು ತಮ್ಮ ಮೌಲ್ಯವನ್ನು ಕಳೆದುಕೊಂಡಿವೆ. ಏಕೆಂದರೆ ಕಾಂಗ್ರೆಸ್ ಪಕ್ಷವೇ ಅದರ ಗ್ಯಾರಂಟಿಯನ್ನು ಕಳೆದುಕೊಂಡಿದೆ. ಒಂದು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಿಜೆಪಿ ಅಭಿವೃದ್ಧಿಯ ಯೋಜನೆಗಳಿಗೆ ಕಾಂಗ್ರೆಸ್ ರಿವರ್ಸ್ ಗೇರ್ ಹಾಕಲಿದೆ ಎಂದು ವಾಗ್ದಾಳಿ ನಡೆಸಿದರು.
ಇದೇ ವೇಳೆ, ನನಗಾಗಿ ಒಂದು ವೈಯಕ್ತಿಕ ಕೆಲಸ ಮಾಡಿ. ಪ್ರತಿಯೊಬ್ಬ ಕಾರ್ಯಕರ್ತ ಕೂಡ ಪ್ರತಿಯೊಂದು ಮನೆಗೆ ತೆರಳಿ. ನಿಮ್ಮ ಸೇವಕ ದೆಹಲಿಯಿಂದ ಬಂದಿದ್ದರು. ನಿಮಗೆ ನಮಸ್ಕಾರ, ಪ್ರಣಾಮಗಳನ್ನು ತಿಳಿಸಿದ್ದಾರೆ ಎಂದು ಹೇಳಿ. ನೀವು ಜನರನ್ನು ಭೇಟಿ ಮಾಡಿದಾಗ ಅವರು (ಜನತೆ) ನನಗೆ ಆಶೀರ್ವಾದ ಮಾಡಲಿದ್ದಾರೆ. ಅವರ ಆಶೀರ್ವಾದವೇ ನನಗೆ ಶಕ್ತಿಯನ್ನು ತುಂಬಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಇದನ್ನೂ ಓದಿ: ರಾಜ್ಯದಲ್ಲಿಂದು ಪ್ರಧಾನಿ ಮೋದಿ 2ನೇ ಹಂತದ ಮತಬೇಟೆ: 3 ಕಡೆ ಸಾರ್ವಜನಿಕ ಸಭೆ, ಕಲಬುರಗಿಯಲ್ಲಿ ರೋಡ್ ಶೋ