ಚಿತ್ರದುರ್ಗ: ಜಿಲ್ಲೆಯ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಎಂ.ಜಯಣ್ಣ (71) ನಿನ್ನೆಯಷ್ಟೇ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. ಆದ್ರೆ ಜನಪರ ಹೋರಾಟಕ್ಕೆ ಜೀವನ ಮುಡಿಪಾಗಿಟ್ಟಿದ್ದ, ಜಯಣ್ಣ ಅನ್ಯಾಯ, ಅಕ್ರಮ ನಡೆದಲ್ಲಿ ಹೋರಾಟಕ್ಕೆ ನಿಲ್ಲುತ್ತಿದ್ದರು.
ಆರಂಭದ ದಿನಗಳಲ್ಲಿ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕರಾಗಿ ರಾಜ್ಯ ಸುತ್ತಿ ಹೋರಾಟದ ಮೂಲಕ ದಲಿತ ಸಮುದಾಯಕ್ಕೆ ಹೊಸ ದಿಕ್ಕು ತೋರಿದ್ದರು. ಅನೇಕರಿಗೆ ಉದ್ಯೋಗ, ಸೂರು ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ನೊಂದ ಜನರ ಕಣ್ಣೀರು ಒರೆಸಿದ್ದರು. ಅಂತೆಯೇ ಬರದನಾಡು ಚಿತ್ರದುರ್ಗಕ್ಕೆ ಭದ್ರೆ ಹರಿಸುವುದು ಕಷ್ಟ ಎನ್ನುವ ಕಾಲದಲ್ಲೇ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷರಾಗಿ ದಶಕಗಳ ಕಾಲ ಅವಿರತ ಹೋರಾಟ ನಡೆಸಿದ್ರು. ನಿರಂತರ ಹೋರಾಟದ ಫಲವಾಗಿ ಬಯಲು ಸೀಮೆಗೆ ಭದ್ರಾ ಮೇಲ್ದಂಡೆ ಯೋಜನೆ ತರುವಲ್ಲಿ ಯಶಸ್ವಿಯೂ ಆದರು.
ಈಗಾಗಲೇ ಭದ್ರಾ ಮೇಲ್ದಂಡೆ ಯೋಜನೆ ಕೊನೆಯ ಹಂತದಲ್ಲಿದ್ದು, ಹಿರಿಯೂರು ತಾಲೂಕಿನ ವಾಣಿವಿಲಾಸ ಸಾಗರ ಜಲಾಶಯಕ್ಕೆ ನೀರು ಹರಿಯುತ್ತಿದೆ. ಹಿಡಿದ ಕೆಲಸ ಒಂದು ಹಂತಕ್ಕೆ ಬಂತೆಂದು ನಿಟ್ಟುಸಿರು ಬಿಟ್ಟ ಹೋರಾಟಗಾರ ಈಗ ಉಸಿರು ಚೆಲ್ಲಿದ್ದಾರೆ. ಹೀಗಾಗಿ ಎಂ.ಜಯಣ್ಣ ದುರ್ಗದ ಜನರ ಮನಸ್ಸಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಆದ್ರೆ ತನಗಾಗಿ ಏನನ್ನೂ ಮಾಡಿಕೊಳ್ಳದ ಹೋರಾಟಗಾರ ಎಂ.ಜಯಣ್ಣ ಕೊನೆಯುಸಿರೆಳೆದಾಗ ಮಣ್ಣು ಮಾಡಲು ಸ್ವಂತಕ್ಕೆ ತುಂಡು ಜಾಗವೂ ಇರಲಿಲ್ಲ.
ಹೀಗಾಗಿ ಮಾಜಿ ಸಚಿವ ಹೆಚ್.ಆಂಜನೇಯ, ಬಿಜೆಪಿ ಸಂಸದ ಎ.ನಾರಾಯಣಸ್ವಾಮಿ ಸ್ವಂತ ಹಣದಲ್ಲಿ ಎರಡು ಎಕರೆ ಜಮೀನು ಖರೀದಿಗೆ ನಿರ್ಧರಿಸಿದ್ದಾರೆ. ಬೆಂಗಳೂರು ರಸ್ತೆಯ ಕ್ಯಾದಿಗ್ಗೆರೆ ಗ್ರಾಮದ ಬಳಿ ಎರಡು ಎಕರೆ ಜಮೀನು ಖರೀದಿಸಿ ಅದೇ ಜಾಗದಲ್ಲಿ ಸ್ಮಾರಕ ನಿರ್ಮಿಸಲು ನಿರ್ಧರಿಸಲಾಗಿದೆ. ಚಿತ್ರದುರ್ಗ ಬಿಜೆಪಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಚಳ್ಳಕೆರೆ ಕಾಂಗ್ರೆಸ್ ಶಾಸಕ ಟಿ.ರಘುಮೂರ್ತಿ ಸ್ಮಾರಕ ನಿರ್ಮಾಣದ ಹೊಣೆ ಹೊತ್ತಿದ್ದಾರೆ.