ಚಿತ್ರದುರ್ಗ : ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಕೆಲವು ಮಹತ್ವದ ಕಡತಗಳು ಇತ್ತೀಚೆಗೆ ಸುರಿದ ಮಳೆಯಿಂದ ನೀರು ಪಾಲಾಗಿದ್ದು ಅರ್ಜಿ ಹಾಕಿ ಯೋಜನೆಗಳನ್ನು ಸದುಪಯೋಗ ಮಾಡಿಕೊಳ್ಳಲೆಂದು ಕಾದು ಕುಳಿತಿದ್ದ ಜಿಲ್ಲೆಯ ಜನರು ಇದೀಗ ಚಿಂತೆಗೀಡಾಗಿದ್ದಾರೆ.
ಸರ್ಕಾರದ ಕೆಲವು ಯೋಜನೆಗಳಗಾಗಿ ಅರ್ಜಿ ಹಾಕಿದ್ದ ಕಡತಗಳು ಮೊನ್ನೆ ಬಿದ್ದ ಮಳೆಗೆ ನೆನೆದು ಮುದ್ದೆಯಾಗಿದ್ದು ಜಿಲ್ಲೆಯ ಜವಳಿ ಮತ್ತು ಕೈಮಗ್ಗ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿ ಕೆಲಸಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
ಕೊರೊನಾ ಹೊಡೆತಕ್ಕೆ ತತ್ತರಿಸಿರುವ ನಿರುದ್ಯೋಗಿಗಳು ಹಲವು ಲೋನ್ಗಳಿಗಾಗಿ ಜವಳಿ ಮತ್ತು ಕೈಮಗ್ಗ ಇಲಾಖೆಗೆ ಅರ್ಜಿ ಹಾಕಿದ್ದರು. ಆದರೆ ಇದೀಗ ಅವುಗಳೆಲ್ಲ ಮಳೆಯ ಹೊಡೆತಕ್ಕೆ ನೀರುಪಾಲಾಗಿದ್ದು ಅರ್ಜಿದಾರರ ಕನಸಿಗೆ ಜವಳಿ ಮತ್ತು ಕೈಮಗ್ಗ ಇಲಾಖೆ ತಣ್ಣೀರೆರಚಿದೆ. ಇಲಾಖೆಗೆ ಬಂದಿದ್ದ ಸಾವಿರಾರು ಅರ್ಜಿಗಳು ನೀರುಪಾಲಾಗಿದ್ದು, ಇದ್ರಲ್ಲಿ ಯಾರು ಯಾವ ಕಾರಣಕ್ಕೆ ಅರ್ಜಿ ಸಲ್ಲಿಸಿದ್ರು ಎಂಬ ಮಾಹಿತಿಯೂ ಸಿಗುತ್ತಿಲ್ಲ. ಇದರಿಂದ ಅಧಿಕಾರಿ ವರ್ಗ ಹೈರಾಣಾಗಿದೆ. ಆದ್ದರಿಂದ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಪ್ರತಿಯೊಬ್ಬ ಅರ್ಜಿದಾರನಿಗೂ ನ್ಯಾಯ ಒದಗಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದರು.
ಮಳೆಯ ಹೊಡೆತಕ್ಕೆ ಇಲಾಖೆಯ ಹಳೆಯ ಕಟ್ಟಡದ ಕೆಳಭಾಗದ ಕೊಠಡಿಯಲ್ಲಿ ಇದ್ದ ಎಲ್ಲಾ ಅರ್ಜಿಗಳು ಮಳೆಗೆ ನಾಶವಾಗಿವೆ. ಇದರಿಂದ ಎಚ್ಚೆತ್ತುಕೊಂಡ ಇಲಾಖೆಯ ಅಧಿಕಾರಿಗಳು, ಕೋಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. 1990 ರಿಂದ ಇದೇ ಕಟ್ಟಡದಲ್ಲಿ ಕಚೇರಿ ಇದ್ದು ಇಷ್ಟು ವರ್ಷದಲ್ಲಿ ಎಂದೂ ಆಗದ ಸಮಸ್ಯೆ ಈಗ ಹೇಗೆ ಉದ್ಭವಿಸಿದೆ ಎಂಬ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.