ಚಿತ್ರದುರ್ಗ: ಪ್ರಧಾನಿ ಮೋದಿ ಇನ್ನೂ ಸಣ್ಣ ಮಕ್ಕಳಂತೆ ಮಾತಾಡುತ್ತಿದ್ದಾರೆ. ಅವರು ಒಂದು ರೀತಿ ಬಾಲಿಶ(ಚೈಲ್ಡಿಶ್)ವಾಗಿ ನಡೆದುಕೊಳ್ಳುತ್ತಿದ್ದಾರೆ. ಇದು ಈ ಶತಮಾನದ ಜೋಕ್ ಎಂದು ಎಡಪಂಥೀಯ ನಾಯಕ ಮತ್ತು ಗುಜರಾತ್ನ ವಡ್ಗಾಮ್ ಕ್ಷೇತ್ರದ ಪಕ್ಷೇತರ ಶಾಸಕ ಜಿಗ್ನೇಶ್ ಮೇವಾನಿ ಅವರು ಪ್ರಧಾನಿ ವಿರುದ್ಧ ಹರಿಹಾಯ್ದಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರೈಲು ನಿಲ್ದಾಣದಲ್ಲಿ ಟೀ ಮಾರಾಟ ಮಾಡಿ ಜೀವನ ನಡೆಸಿದ್ದೇನೆ ಎಂಬ ಪ್ರಧಾನಿ ಹೇಳಿಕೆಗೆ ಪ್ರತಿಕ್ರಿಯಿಸಿದರು. ಅವರು ರೈಲು ನಿಲ್ದಾಣದಲ್ಲಿ ಟೀ ಮಾರಿದ್ದಾರೊ ಇಲ್ವೋ ಗೊತ್ತಿಲ್ಲ. ಆದರೆ ದೇಶವನ್ನು ಖಂಡಿತವಾಗಿಯೂ ಮಾರಾಟ ಮಾಡಿದ್ದಾರೆ ಎಂದು ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇನ್ನು ಮೋದಿಯವರು ಯಾರೆಂಬುದೇ ನನಗೆ ಗೊತ್ತಿಲ್ಲ. ಮೋದಿ ಏನ್ಮಾಡ್ತಾರೆ ಎಂಬುದೂ ಗೊತ್ತಿಲ್ಲ ಎಂದು ಶಾಸಕ ಜಿಗ್ನೇಶ್ ಇದೇ ವೇಳೆ ವ್ಯಂಗ್ಯವಾಡಿದ್ದಾರೆ.
ಇನ್ನು, ದೇಶದಲ್ಲಿ ಮುಸ್ಲಿಂ ಹಾಗೂ ದಲಿತರ ಮೇಲೆ ಹಲ್ಲೆ ನಡೆಯುತ್ತಿವೆ ಎಂದು ಆರೋಪಿಸಿದ ಮೇವಾನಿ ಅವರು, ಬಿಜೆಪಿಯವರು ದಲಿತರು, ಮುಸ್ಲಿಂರನ್ನು ಮನುಷ್ಯರಂತೆ ಕಾಣುವುದಿಲ್ಲ. ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ ಟಿಪ್ಪು ಜಯಂತಿ ಹಾಗೂ ಪಠ್ಯದಲ್ಲಿ ಟಿಪ್ಪು ಪಾಠ ರದ್ದುಗೊಳಿಸುವ ವಿಚಾರವಾಗಿ ಪ್ರತಿಕ್ರಿಯಿಸಿ ಮೇವಾನಿ, ಸಂಘ ಪರಿವಾರ ಹಾಗೂ ಬಿಜೆಪಿಯವರ ಅಜೆಂಡಾ ಇರುವುದೇ ಇಸ್ಲಾಂ ಹಿನ್ನೆಲೆ ಇರುವ ವ್ಯಕ್ತಿಗಳ ಇತಿಹಾಸ ಅಳಿಸಿ, ಟಿಪ್ಪು ಹೆಸರನ್ನು ಶಾಶ್ವತವಾಗಿ ಇಲ್ಲವಾಗುವಂತೆ ಮಾಡುವುದು ಎಂದು ದೂರಿದರು.