ಚಿತ್ರದುರ್ಗ: ಲಾಕ್ಡೌನ್ ನಿಯಮ ಉಲ್ಲಂಘಿಸಿದರೆ ಜನಸಾಮಾನ್ಯರ ವಿರುದ್ಧ ಪ್ರಕರಣ ದಾಖಲಿಸುತ್ತಾರೆ. ಆದರೆ ಅದು ಜನಪ್ರತಿನಿಧಿಗಳಿಗೆ ಅನ್ವಯಿಸುವುದಿಲ್ಲವೇ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಕಾಡುತ್ತಿದೆ.
ಲಾಕ್ಡೌನ್ ಉಲ್ಲಂಘಿಸಿ ಎಂಎಲ್ಸಿ ಹೆಚ್.ಎಂ.ರೇವಣ್ಣ ನೇತೃತ್ವದಲ್ಲಿ ಕಾಂಗ್ರೆಸ್ ಜಿಲ್ಲಾ ಪಂಚಾಯಿತಿ ಸದಸ್ಯರ ಸಭೆ ನಡೆಸಲಾಗಿದೆ. ಮೇ 22ರಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಆಯ್ಕೆ ಚುನಾವಣೆ ಹಿನ್ನೆಲೆ ಚಿತ್ರದುರ್ಗ ನಗರದ ಹೊರವಲಯದ ತೋಟದ ಮನೆಯಲ್ಲಿ ಈ ಸಭೆ ನಡೆಸಲಾಗಿದೆ.
ಸಭೆಯಲ್ಲಿ ಶಾಸಕ ರಘುಮೂರ್ತಿ, ಎಂಎಲ್ಸಿ ಜಯಮ್ಮ ಬಾಲರಾಜ್, ಮಾಜಿ ಸಚಿವ ಹೆಚ್.ಆಂಜನೇಯ, ಡಿ.ಸುಧಾಕರ್, ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಸೇರಿ ಹಲವರಿದ್ದರು ಎನ್ನಲಾಗಿದೆ.
ಜಿ.ಪಂ ಸದಸ್ಯರು ಸೇರಿ ನೂರಕ್ಕೂ ಹೆಚ್ಚು ಜನ ಸಭೆಯಲ್ಲಿ ಭಾಗಿಯಾಗಿ ನಿಯಮ ಉಲ್ಲಂಘನೆ ಮಾಡಿದ್ದಾರೆ. ಹೆಚ್.ಎಂ.ರೇವಣ್ಣ ಅವರನ್ನು ಕೇಳಿದರೆ, ಚುನಾವಣೆ ಘೋಷಣೆ ಹಿನ್ನೆಲೆ ಸಭೆ ನಡೆಸಿದ್ದೇವೆ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.