ಚಿತ್ರದುರ್ಗ: ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಗೆ ಕೆರೆ-ಕಟ್ಟೆಗಳು ಭರ್ತಿಯಾಗಿವೆ. ನಗರದ ಹೊರವಲಯದ ಐತಿಹಾಸಿಕ ಮಲ್ಲಾಪುರ ಕೆರೆ ಕೋಡಿ ಬಿದ್ದಿದ್ದು, ಬಹುತೇಕ ರಸ್ತೆಗಳು ನೀರಿನಿಂದ ಆವೃತವಾಗಿವೆ.
ಕೆರೆಯ ನೀರಿನಿಂದ ವಾಹನ ಸಂಚಾರ, ಜನಜೀವನ ಅಸ್ತವ್ಯಸ್ತವಾಗಿದೆ. ಮಲ್ಲಾಪುರ ಗ್ರಾಮದ ಹಲವು ಮನೆಗಳು ನೀರಿನಿಂದ ಜಲಾವೃತವಾಗಿದ್ದು, ಮನೆಗೆ ನುಗ್ಗಿದ ನೀರನ್ನು ಹೊರ ಹಾಕಲು ಜನರು ಹರಸಾಹಸ ಪಟ್ಟಿದ್ದಾರೆ. ನೀರಿನಿಂದ ದ್ವೀಪದಂತಾದ ಮಲ್ಲಾಪುರ ಗ್ರಾಮದ ತುಂಬೆಲ್ಲಾ ಪ್ಲಾಸ್ಟಿಕ್ ತ್ಯಾಜ್ಯ, ಗಲೀಜು ನೀರು ಹರಿದು ಬಂದಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ.
ತ್ಯಾಜ್ಯಗಳಿಂದ ಕೂಡಿದ್ದ ನೀರು ನುಗ್ಗಿದ್ದರಿಂದ ಇಡೀ ಗ್ರಾಮ ಕೆಟ್ಟ ವಾಸನೆಯಿಂದ ಕೂಡಿದ್ದು, ಜಿಲ್ಲಾಡಳಿತ, ನಗರಸಭೆ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.