ಚಿತ್ರದುರ್ಗ: ಆರೋಗ್ಯ ಸಚಿವ ಶ್ರೀರಾಮುಲು ತವರೂರು ಚಿತ್ರದುರ್ಗ ಜಿಲ್ಲೆಯಲ್ಲಿ ವೈದ್ಯರ ಕೊರತೆ ಎದುರಾಗಿದೆ. ಕೊರೊನಾ ಅಟ್ಟಹಾಸದ ನಡುವೆ ವೈದ್ಯರಿಲ್ಲದೆ ಜಿಲ್ಲಾ ಕೋವಿಡ್ ಆಸ್ಪತ್ರೆ ಬಿಕೋ ಎನ್ನುತ್ತಿದೆ.
ಉತ್ತಮ ಸಂಬಳ ಕೊಡ್ತೀವಿ ಎಂದರೂ ಕೋವಿಡ್-19ಗೆ ಚಿಕಿತ್ಸೆ ನೀಡಲು ವೈದ್ಯರು ಹಿಂದೇಟು ಹಾಕುತ್ತಿದ್ದು, ಹೀಗಾಗಿ ಇಡೀ ಆರೋಗ್ಯ ಇಲಾಖೆ ವೈದ್ಯರಿಲ್ಲದೇ ಪರದಾಡುತ್ತಿದೆಯಂತೆ. ಈಗಾಗಲೇ ಕೊರೊನಾ ವೈರಸ್ ಪ್ರಪಂಚದಾದ್ಯಂತ ಕದಂಬಬಾಹು ಚಾಚಿದ್ದು, ಬಲಿಷ್ಠ ರಾಷ್ಟ್ರಗಳೇ ಮಂಡಿಯೂರಿವೆ.
ಕೋಟೆನಾಡು ಚಿತ್ರದುರ್ಗ ಜಿಲ್ಲೆಗೂ ಕಾಲಿಟ್ಟಿರುವ ಕಿಲ್ಲರ್ ಕೊರೊನಾಕ್ಕೆ ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆಗೆ ವೈದ್ಯರ ಕೊರತೆ ಎದುರಾಗಿದೆಯಂತೆ. ಅಲ್ಲದೇ ಈಗಾಗಲೇ ಹೊರರಾಜ್ಯಗಳಿಂದ ಆಗಮಿಸಿರುವ 40 ಜನರಲ್ಲಿ ಸೋಂಕು ಪತ್ತೆಯಾಗಿತ್ತು. ಆದರೆ ಅದೃಷ್ಟವಶಾತ್ ಅವರಲ್ಲಿ 27 ಜನ ಗುಣಮುಖರಾಗಿದ್ದಾರೆಂದು ಚಿತ್ರದುರ್ಗದ ಜನರು ನಿಟ್ಟುಸಿರುಬಿಟ್ಟಿದ್ದಾರೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರಸ್ತುತವಾಗಿ ಕೋವಿಡ್ಗೆ ಚಿಕಿತ್ಸೆ ನೀಡಲು ಯಾವೊಬ್ಬ ವೈದ್ಯರು ಮುಂದೆ ಬರುತ್ತಿಲ್ಲ ಎನ್ನಲಾಗಿದ್ದು, ಜಿಲ್ಲೆಯ ಜನರು ತೀವ್ರ ಆತಂಕಕ್ಕೀಡಾಗಿದ್ದಾರೆ. ಆರೋಗ್ಯ ಸಚಿವ ಶ್ರೀರಾಮುಲು ತವರು ಜಿಲ್ಲೆಯಲ್ಲೇ ಈ ರೀತಿ ವೈದ್ಯರ ಕೊರತೆ ಕಾಡುತ್ತಿದ್ದರೆ, ಇನ್ನುಳಿದ ಜಿಲ್ಲೆಗಳ ಪಾಡು ಹೇಗೆ ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ.
ಇನ್ನು ಕೋವಿಡ್-19 ಆರಂಭವಾದಾಗಲೇ ಚಿತ್ರದುರ್ಗ ಅರೋಗ್ಯ ಇಲಾಖೆಯು 10 ಜನ ವೈದ್ಯರನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಲು ಮುಂದಾಗಿತ್ತು. ಆದರೆ ಈವರೆಗೆ ಓರ್ವ ವೈದ್ಯ ಸಹ ಕೋವಿಡ್ಗೆ ಚಿಕಿತ್ಸೆ ನೀಡಲು ಮುಂದೆ ಬಂದಿಲ್ಲವೆಂಬುದೇ ವಿಪರ್ಯಾಸವಾಗಿದೆ. ಇದರಿಂದಾಗಿ ಜಿಲ್ಲಾಸ್ಪತ್ರೆಯಲ್ಲಿರುವ ಇಬ್ಬರು ಫಿಸಿಶಿಯನ್ಗಳೇ ವಿಶ್ರಾಂತಿಯಿಲ್ಲದೇ ಕೊರೊನಾ ಚಿಕಿತ್ಸೆ ನೀಡುವಂತಾಗಿದೆ.
ಹೆಚ್ಚಿನ ವೇತನ ನೀಡಿ ಬನ್ನಿ ಎಂದು ಕರೆದರೂ ವೈದ್ಯರು ಬಾರದೆ ಇರುವುದು ಆರೋಗ್ಯ ಇಲಾಖೆಗೆ ತಲೆಬಿಸಿಯಾಗಿ ಪರಿಣಮಿಸಿದೆ. ಒಟ್ಟಾರೆ ಜಿಲ್ಲೆಯಲ್ಲಿ ಒಟ್ಟು 27 ಕೊರೊನಾ ರೋಗಿಗಳು ಗುಣಮುಖರಾಗಿದ್ದು, ಅವರನ್ನು ಬಿಡುಗಡೆ ಮಾಡಿರುವ ಸಂತಸದ ವಿಚಾರ ಜನರಿಗೆ ಕೊಂಚಮಟ್ಟಿಗೆ ನೆಮ್ಮದಿ ತಂದಿತ್ತು.
ಕೋವಿಡ್ ಆಸ್ಪತ್ರೆಯಲ್ಲೀಗ ಚಿಕಿತ್ಸೆ ನೀಡಲು ವೈದ್ಯರ ಕೊರತೆ ಇರುವ ವಿಚಾರ ಕೇಳಿ ಜನಸಾಮಾನ್ಯರು ಬೆಚ್ಚಿ ಬಿದ್ದಿದ್ದಾರೆ. ಪ್ರಸ್ತುತವಾಗಿ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ತಕ್ಕಮಟ್ಟಿಗೆ ಕಡಿಮೆಯಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಾಗುವ ಮುನ್ನ ಆರೋಗ್ಯ ಸಚಿವ ಶ್ರೀರಾಮುಲು ವೈದ್ಯರ ನೇಮಕಕ್ಕೆ ಮುಂದಾಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.