ಚಿತ್ರದುರ್ಗ : ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೂ ಒಂದೂವರೆ ವರ್ಷ ಬಾಕಿ ಇರುವಂತೆಯೇ ಹಾಲಿ ವಿಧಾನ ಪರಿಷತ್ ಸದಸ್ಯ ರಘು ಆಚಾರ್ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ದೊಡ್ಡ ಸಿದ್ದವ್ವನಹಳ್ಳಿಯಲ್ಲಿ ಗ್ರಾಮ ವಾಸ್ತವ್ಯ ಮಾಡುವ ಮೂಲಕ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ವರ್ಧೆ ನಡೆಸಲು ಇಂದಿನಿಂದಲೇ ತಯಾರಿ ನಡೆಸಿದ್ದಾರೆ.
ಕಳೆದ 2013ರಲ್ಲಿ ವಿಧಾನ ಪರಿಷತ್ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಜಿಲ್ಲೆಗೆ ಆಗಮಿಸಿದ ಮೈಸೂರು ಮೂಲದ ರಘು ಆಚಾರ್, ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗಲೇ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ನಡೆಸಿ ಆಡಳಿತಾರೂಢ ಕಾಂಗ್ರೆಸ್ ಅಭ್ಯರ್ಥಿ ಸೇತೂರಾಂ ಹಾಗೂ ಬಿಜೆಪಿ ಅಭ್ಯರ್ಥಿ ಕೆ.ಎಸ್.ನವೀನ್ ವಿರುದ್ಧ ಜಯ ಸಾಧಿಸಿದ್ದರು.
ನಂತರ ಕಾಂಗ್ರೆಸ್ ಪಕ್ಷವನ್ನು ಸೇರಿ 2015ರಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಕೂಡ ಜಯಭೇರಿ ಸಾಧಿಸಿದ್ದರು. ಆದರೆ, ಇಂದಿನ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದಲೇ ರಘು ಆಚಾರ್ ಸ್ಪರ್ಧೆ ನಡೆಸಬಹುದು ಎಂದು ತಿಳಿದಿದ್ದ ಜಿಲ್ಲೆಯ ವಿವಿಧ ಪಕ್ಷದ ಬಹುತೇಕ ಮುಖಂಡರು ಹಾಗೂ ಜನರಿಗೆ ಶಾಕ್ ನೀಡಿದ್ದಾರೆ.
ರಘು ಆಚಾರ್ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧೆ ನಡೆಸದೆ, ಇದೀಗ ಚಿತ್ರದುರ್ಗ ವಿಧಾನಸಭಾ ಕ್ಷೇತ್ರವಾದ ದೊಡ್ಡ ಸಿದ್ದವ್ವನಹಳ್ಳಿಯಲ್ಲಿ ಭಾನುವಾರ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಮನೆಯಲ್ಲಿ ಗ್ರಾಮ ವಾಸ್ತವ್ಯ ಮಾಡುವ ಮೂಲಕ ಮುಂಬರುವ ವಿಧಾನಸಭಾ ಚುನಾವಣೆಗೆ ಇಂದಿನಿಂದಲೇ ತಾಲೀಮು ನಡೆಸುತ್ತಿದ್ದಾರೆ.
ಭಾನುವಾರ ರಾತ್ರಿ 9 ಗಂಟೆ ಸುಮಾರಿಗೆ ದೊಡ್ಡಸಿದ್ದವ್ವನಹಳ್ಳಿಗೆ ಆಗಮಿಸಿದ ರಘು ಆಚಾರ್, ಕಾಂಗ್ರೆಸ್ ಕಾರ್ಯಕರ್ತ ಶಿವ ಎಂಬ ಯುವಕನ ಮನೆಯಲ್ಲಿ ಮಲಗಿದ್ದು, ಸೋಮವಾರ ಬೆಳಗ್ಗೆ ಗ್ರಾಮದಲ್ಲೆಡೆ ಸುತ್ತಾಡಿ ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿದ್ದಾರೆ. ಅಲ್ಲದೆ ತನಗೆ ರಾಜಕೀಯವಾಗಿ ಜನ್ಮ ನೀಡಿದ ಚಿತ್ರದುರ್ಗ ಜಿಲ್ಲೆಯ ಸೇವೆ ಮಾಡಬೇಕೆಂಬುದು ನನ್ನ ಆಶಯವಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರದಿಂದ ಸ್ಪರ್ಧೆ ನಡಸಲಿದ್ದೇನೆ.
ಕ್ಷೇತ್ರದ ಜನರು ಸಹಕಾರ ನೀಡಿ ಮತ ನೀಡಬೇಕು ಎಂದು ಗ್ರಾಮದ ಜನರಲ್ಲಿ ಮನವಿ ಮಾಡಿದ್ದಾರೆ. ವಿಧಾನಸಭಾ ಚುನಾವಣೆ ಇನ್ನೂ ಒಂದೂವರೆ ವರ್ಷ ಬಾಕಿ ಇರುವಂತೆಯೇ ರಘು ಆಚಾರ್ ದೊಡ್ಡ ಸಿದ್ದವ್ವನಹಳ್ಳಿಯಲ್ಲಿ ಗ್ರಾಮ ವಾಸ್ತವ್ಯ ಮಾಡಿರುವುದು ಜಿಲ್ಲೆಯ ವಿವಿಧ ಪಕ್ಷದ ಮುಖಂಡರು ಹಾಗೂ ಜನರಲ್ಲಿ ಅಚ್ಚರಿ ಮೂಡಿಸಿದೆ.