ಚಿತ್ರದುರ್ಗ: ಪಾಳುಬಿದ್ದ ಮನೆಯಲ್ಲಿ ಐದು ಅಸ್ಥಿಪಂಜರ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ವಿಷಯಗಳು ಬೆಳಕಿಗೆ ಬಂದಿವೆ. ಇದು ಜಗನ್ನಾಥ ರೆಡ್ಡಿ ಎಂಬವರ ಮನೆಯಾಗಿದೆ. ವ್ಹೀಲ್ ಚೇರ್, ಮೆಡಿಸಿನ್, ಆಕ್ಸಿಜನ್ ಸಿಲಿಂಡರ್ ಮನೆಯಲ್ಲಿ ಸಿಕ್ಕಿದೆ ಎಂದು ತಿಳಿದುಬಂದಿದೆ.
ಜಗನ್ನಾಥ ರೆಡ್ಡಿ ಅವರ ಪತ್ನಿ ಪ್ರೇಮಾ ಮತ್ತು ಮಕ್ಕಳಾದ ತ್ರಿವೇಣಿ, ಕೃಷ್ಣ ರೆಡ್ಡಿ, ನರೇಂದ್ರ ರೆಡ್ಡಿ ಎಂಬವರು ಈ ಮನೆಯಲ್ಲಿ ವಾಸವಾಗಿದ್ದರು. ಈ ಐವರು ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಮನೆಯಲ್ಲಿ ಶ್ವಾನದ ಅಸ್ಥಿಪಂಜರವೂ ದೊರೆತಿದೆ. ಸುದ್ದಿ ತಿಳಿಯುತ್ತಿದ್ದಂತೆ ಮನೆ ಮುಂದೆ ನೂರಾರು ಜನರು ಜಮಾಯಿಸಿದ್ದರು. ಪೊಲೀಸರು ಮತ್ತು ಎಫ್ಎಸ್ಎಲ್ ತಂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿತು. ಅಸ್ಥಿಪಂಜರಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಎಸ್ಪಿ ಪ್ರತಿಕ್ರಿಯೆ: ಚಿತ್ರದುರ್ಗ ಎಸ್ಪಿ ಧಮೇಂದರ್ ಕುಮಾರ್ ಪ್ರತಿಕ್ರಿಯಿಸಿ, "ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ತೆರಳಿ ಮನೆ ಪರಿಶೀಲಿಸಿದಾಗ 5 ಅಸ್ಥಿಪಂಜರುಗಳು ಪತ್ತೆಯಾಗಿವೆ. ಒಂದು ರೂಮಿನಲ್ಲಿ ನಾಲ್ಕು, ಇನ್ನೊಂದು ರೂಮಿನಲ್ಲಿ ಒಂದು ಅಸ್ಥಿಪಂಜರ ದೊರೆತಿದೆ. ಇಬ್ಬರು ಮಹಿಳೆಯರು ಮತ್ತು ಮೂವರು ಪುರುಷರ ಅಸ್ಥಿಪಂಜರ ಎಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ" ಎಂದು ಮಾಹಿತಿ ನೀಡಿದ್ದಾರೆ.
"2019ರಿಂದ ಈ ಕುಟುಂಬಸ್ಥರು ಕಾಣಿಸುತ್ತಿಲ್ಲ ಮತ್ತು ಅವರ ಜೊತೆ ಕಳೆದ 8 ವರ್ಷಗಳಿಂದ ಸಂಪರ್ಕದಲ್ಲಿರಲಿಲ್ಲ. 2019ರಲ್ಲಿ ವಾಸನೆ ಬಂದಿತ್ತು. ಕಳೆದ ಎರಡು ತಿಂಗಳ ಹಿಂದೆಯಷ್ಟೇ ಬಾಗಿಲು ಓಪನ್ ಆಗಿದೆ ಎಂದು ಅಕ್ಕಪಕ್ಕದವರು ಮತ್ತು ಪಕ್ಕದ ಕಾಲೊನಿಯಲ್ಲಿರುವ ಸಂಬಂಧಿಕರು ಮಾಹಿತಿ ನೀಡಿದ್ದಾರೆ. ಮನೆ ಲಾಕ್ ಇದ್ದುದರಿಂದ ಯಾರೂ ಕೂಡ ಓಪನ್ ಮಾಡಿರಲಿಲ್ಲ. ಆ ವೇಳೆಯಲ್ಲಿ ಯಾರೂ ಜವಾಬ್ದಾರಿ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಮತ್ತು ಹೆಚ್ಚು ಶಂಕೆ ಕಂಡುಬರದ ಕಾರಣ ಪೊಲೀಸರು ಹೆಚ್ಚಾಗಿ ವಿಚಾರಣೆ ಮಾಡಿರಲಿಲ್ಲ. ಬೆಸ್ಕಾಂಗೆ ವಿದ್ಯುತ್ ಬಿಲ್ ಕಟ್ಟಿರುವ ಮಾಹಿತಿಯಂತೆ 2019ರ ಜನವರಿ ಮತ್ತು ಏಪ್ರಿಲ್ ಮಧ್ಯದಲ್ಲಿ ಈ ಘಟನೆ ಆಗಿರಬಹುದು. ಪೋಸ್ಟ್ ಮಾರ್ಟನ್ ಬಳಿಕ ಸಂಗ್ರಹಿಸಿರುವ ಮಾದರಿಯನ್ನು ಎಫ್ಎಸ್ಎಲ್ಗೆ ಕಳುಹಿಸುತ್ತೇವೆ. ಎಫ್ಎಸ್ಎಲ್ ವರದಿ ಮತ್ತು ಮರಣೋತ್ತರ ಪರೀಕ್ಷಾ ವರದಿ ಬಳಿಕ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಸಂಬಂಧಿ ಪವನ್ ರೆಡ್ಡಿ ನೀಡಿರುವ ದೂರಿನ ಆಧಾರದ ಮೇಲೆ ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡಿದ್ದೇವೆ" ಎಂದು ಎಸ್ಪಿ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಜಗನ್ನಾಥ್ ರೆಡ್ಡಿ ಪತ್ನಿ ಪ್ರೇಮಾ ಅವರ ಸಹೋದರಿ ಲಲಿತಮ್ಮ, "ಕಳೆದ ಎಂಟು ವರ್ಷದ ಹಿಂದೆ ನಾನು ನನ್ನ ತಂಗಿ ಮನೆಗೆ ಬಂದಿದ್ದೆ. ಮನೆಗೆ ಬಂದಾಗೆಲ್ಲಾ ಮಾವ ಜಗನ್ನಾಥ್ ರೆಡ್ಡಿ ತನ್ನ ಮಕ್ಕಳಿಗೆ ಮದುವೆ ಆಗಿಲ್ಲ ಎಂದು ಕೊರಗುತ್ತಿದ್ದರು. ಮಕ್ಕಳ ಮದುವೆ ವಿಚಾರದಿಂದಲೇ ಮಾನಸಿಕ ಖಿನ್ನತೆಗೆ ಒಳಪಟ್ಟಿದ್ದರು. ನೀನು ಮಾತ್ರ ಮಕ್ಕಳ ಮದುವೆ ಮಾಡಿದ್ದೀಯಾ, ನಾನು ಮಾಡಿಲ್ಲ ಎಂದು ನೊಂದುಕೊಳ್ತಿದ್ದರು. ನನ್ನ ತಂಗಿ ಆಕೆಯ ಮಕ್ಕಳಿಗೆ ಮದುವೆ ಮಾಡಿದ್ರು, ನಮ್ಮನ್ನು ದೂರ ಮಾಡ್ತಿದ್ದಾರೆ ಎಂದು ಹೇಳ್ತಿದ್ದಳು. ಹಾಗಾಗಿಯೇ ಇಬ್ಬರು ಗಂಡು ಮಕ್ಕಳಿಗೆ ಮದುವೆ ಮಾಡಿರಲಿಲ್ಲ. ಮಗಳು ಬೋನ್ ಮ್ಯಾರೋ ಖಾಯಿಲೆಯಿಂದ ಬಳಲುತ್ತಿದ್ದರು. ಎಲ್ಲಾ ನೋವಿನಿಂದ ನನ್ನ ತಂಗಿ ಮತ್ತು ಮಾವ ಇಬ್ಬರೂ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. 8 ವರ್ಷದಿಂದ ಅವರು ನಮಗೂ ಸಂಪರ್ಕಕ್ಕೆ ಸಿಕ್ಕಿಲ್ಲ. ಐವರ ಸಾವಿನ ಸುದ್ದಿ ಕೇಳಿ ನಮಗೆ ಶಾಕ್ ಆಯಿತು. ಪೊಲೀಸರ ತನಿಖೆ ಬಳಿಕ ಸತ್ಯಾಂಶ ತಿಳಿಯಲಿದೆ" ಎಂದು ಮಾಧ್ಯಮಕ್ಕೆ ಹೇಳಿದರು.
ವಿದ್ಯುತ್ ಬಿಲ್ ಬಾಕಿ: ಜಗನ್ನಾಥ್ ರೆಡ್ಡಿ 2019 ಜನವರಿಯಲ್ಲಿ ಕೊನೆಯದಾಗಿ ವಿದ್ಯುತ್ ಬಿಲ್ ಪಾವತಿ ಮಾಡಿದ್ದಾರೆ. ಆ ಬಳಿಕ ಏಪ್ರಿಲ್ನಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಜಗನ್ನಾಥ್ ಅವರು ನಿವೃತ್ತ ಇಂಜಿನಿಯರ್ ಪೆನ್ಷನ್ ಹಣಕ್ಕಾಗಿ ಪ್ರತಿ ವರ್ಷ ದಾಖಲೆ ಸಲ್ಲಿಸುತ್ತಿದ್ದರು. ಪೊಲೀಸರು ಕೊನೆಯದಾಗಿ ಯಾವ ವರ್ಷ ದಾಖಲೆ ಸಲ್ಲಿಸಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಚಿನ್ನ ಅಡವಿಟ್ಟು ಸಾಲ ಪಡೆದಿರುವ ಮಾಹಿತಿ ಲಭ್ಯವಾಗಿದೆ. ಚಿನ್ನದ ಸಾಲದ ಹಣ ಯಾವ ತಿಂಗಳು ಭರ್ತಿ ಮಾಡಿದ್ದರೆಂಬ ಮಾಹಿತಿಯನ್ನೂ ಪೊಲೀಸರು ಸಂಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ: ಚಿತ್ರದುರ್ಗ: ಪಾಳು ಬಿದ್ದ ಮನೆಯಲ್ಲಿ ಐವರ ಅಸ್ಥಿಪಂಜರಗಳು ಪತ್ತೆ, ಬೆಚ್ಚಿಬಿದ್ದ ಜನತೆ