ಚಿತ್ರದುರ್ಗ: ದಸರಾ ಹಬ್ಬದಲ್ಲಿ 9 ದಿನಗಳ ಕಾಲ ನಡೆಯುವ ಶರಣ ಸಂಸ್ಕೃತಿ ಉತ್ಸವದಲ್ಲಿ ನೀಡುವ ಮುರುಘಾ ಶ್ರೀ ಪ್ರಶಸ್ತಿಗೆ ಐವರು ಸಾಧಕರನ್ನು ಆಯ್ಕೆ ಮಾಡಲಾಗಿದೆ.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಐವರನ್ನು ಶಿವಮೂರ್ತಿ ಮುರುಘಾ ಶರಣರು, ಮುರುಘಾ ಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿ ಪ್ರಶಸ್ತಿಯನ್ನು ಘೋಷಿಸಿದ್ದಾರೆ. ಐವರ ಪೈಕಿ ಈಗಾಗಲೇ ವಿವಿಧ ಪಾತ್ರಗಳಲ್ಲಿ ಸಿನಿ ರಸಿಕರಿಗೆ ಮನರಂಜನೆ ನೀಡಿರುವ ಡಾ. ಮುಖ್ಯಮಂತ್ರಿ ಚಂದ್ರು ಅವರ ಸಾಧನೆ ಗುರುತಿಸಿ ಮುರುಘಾ ಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ವಿಶ್ರಾಂತ ನ್ಯಾಯಮೂರ್ತಿಗಳು, ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಹೆಚ್.ಬಿಲ್ಲಪ್ಪ ಈ ಪ್ರಶಸ್ತಿಗೆ ಭಾಜನರಾಗಿದ್ದು, ಹುಲಸೂರಿನಲ್ಲಿರುವ ಶ್ರೀ ಗುರುಬಸವೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಮ.ನಿ.ಪ್ರ. ಶಿವಾನಂದ ಮಹಾಸ್ವಾಮಿಗಳು ಹಾಗೂ ಮದ್ಯಪಾನ ನಿಷೇಧಿಸುವಂತೆ ಮಹಿಳೆಯರ ಹೋರಾಟಕ್ಕೆ ನಾಂದಿ ಹಾಡಿದ ಸುರತ್ಕಲ್‌ನ ಶ್ರೀಮತಿ ಸ್ವರ್ಣಾ ಭಟ್ ಹಾಗೂ ಚಿತ್ರದುರ್ಗದ ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಟ್ರಸ್ಟ್ ಧರ್ಮದರ್ಶಿಗಳಾದ ಎಸ್.ಷಣ್ಮುಖಪ್ಪ ಸೇರಿ ಒಟ್ಟು ಐದು ಜನರು ಶರಣ ಸಂಸ್ಕೃತಿ ಉತ್ಸವದಲ್ಲಿ ಮುರುಘಾ ಶ್ರೀ ಪ್ರಶಸ್ತಿ ಮುಡಿಗೇರಿಸಿಕೊಳ್ಳಲಿದ್ದಾರೆ.