ಚಿತ್ರದುರ್ಗ: ಹಿರಿಯೂರು ತಾಲೂಕಿನ ಕರಿಓಬನಹಳ್ಳಿ ಗ್ರಾಮದಲ್ಲಿ ಅತ್ಯುತ್ತಮ ತರಕಾರಿ ಬೆಳೆದು ಲಾಭ ಗಳಿಸಬೇಕು ಎಂದುಕೊಂಡಿದ್ದ ರೈತರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಟೊಮೆಟೊ ಬೆಳೆಗೆ ಬೆಂಬಲ ಬೆಲೆ ಸಿಗದೆ ಅನ್ನದಾತರು ನಷ್ಟ ಅನುಭವಿಸುತ್ತಿದ್ದಾರೆ.
ಕಷ್ಟಪಟ್ಟು ಬೆಳೆಸಿದ ಟೊಮೆಟೊ ಬೆಳೆಗೆ ಸೂಕ್ತ ಬೆಲೆ ಸಿಗದ ಕಾರಣ ಬೆಳೆಗಾರರು ಟೊಮೆಟೊ ಫಸಲನ್ನು ಬೀದಿಗೆ ಚೆಲ್ಲುತ್ತಿದ್ದಾರೆ. ಟೊಮೆಟೊ ಹೊಲದಲ್ಲಿ ಕುರಿ ಬಿಟ್ಟು ಮೇಯಿಸಿ ಆಕ್ರೋಶ ಹೊರಹಾಕುತ್ತಿದ್ದಾರೆ.
ಕಳೆದ ವಾರ ಸುರಿದ ಅಕಾಲಿಕ ಮಳೆಯ ಬಳಿಕ ಟೊಮೆಟೊ ಬೆಳೆ ನೆಲಕಚ್ಚಿದೆ. ಇನ್ನೊಂದೆಡೆ ಮಾರುಕಟ್ಟೆಯಲ್ಲಿ ಸಹ ಸೂಕ್ತ ಬೆಲೆ ಸಿಗದೆ ಕಂಗಾಲಾಗಿರುವ ರೈತರು ಟೊಮೆಟೊ ಫಸಲನ್ನೇ ನಾಶಪಡಿಸುತ್ತಿದ್ದಾರೆ.
ಹೀಗೆಯೇ ಟೊಮೆಟೊ ಬೆಳೆ ನಂಬಿದ್ದ ಕರಿಓಬನಹಳ್ಳಿಯ ರೈತ ಮುಕುಂದ 3 ಎಕರೆ 20 ಗುಂಟೆ ಪ್ರದೇಶದಲ್ಲಿ ಸುಮಾರು 4 ಲಕ್ಷ ರೂಪಾಯಿ ಖರ್ಚು ಮಾಡಿ ಟೊಮೆಟೊ ಬೆಳೆದಿದ್ದರು. ಕಳೆದ 15 ದಿನಗಳಿಂದ ಹೊಲದಲ್ಲಿ ಉತ್ತಮ ಫಸಲು ಬಂದಿತ್ತು. ಆದರೆ ಮಾರುಕಟ್ಟೆಯಲ್ಲಿ ಬೆಲೆ ಸಿಗದೆ ಕಂಗಾಲಾಗಿದ್ದಾರೆ. ಮಾದರಿ ರೈತನ ಕನಸು ಹೊತ್ತ ಮುಕುಂದ ಇಂದು ಸಾಲದ ಸುಳಿಗೆ ಸಿಲುಕಿಕೊಂಡಿದ್ದಾರೆ.
ಟೊಮೆಟೊ ಬೆಳೆ ಉತ್ತಮ ಲಾಭ ನೀಡಬಹುದು ಎಂದು 4 ಲಕ್ಷ ರೂ. ಕೈ ಸಾಲ ಮಾಡಿ ಬೆಳೆ ಬೆಳೆದು ಇಂದು ಫಸಲನ್ನ ಬೀದಿಗೆ ಚೆಲ್ಲುವಂತಾಗಿದೆ ಎಂದು ರೈತ ಮುಕುಂದ ಅಳಲು ತೋಡಿಕೊಂಡಿದ್ದಾರೆ.