ಚಿತ್ರದುರ್ಗ: ಕುಮಾರಸ್ವಾಮಿಯವರಿಗೆ ಕಾಂಗ್ರೆಸ್‌ನವರು ಬಕ್ರಾ ಮಾಡಿದ್ದಾರೆಂದು ತಡವಾಗಿ ಮನವರಿಕೆಯಾಗಿದೆ. ಇಲ್ಲದಿದ್ದರೆ ಇಷ್ಟೊತ್ತಿಗಾಗಲೇ ಅವರು ಸಿಎಂ ಆಗ್ತಿದ್ರು ಎಂದು ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಕನಕದಾಸ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಓದಿ : ಇಮೇಜ್ ಇದ್ರೆ ಅಲ್ವಾ ಡೌನ್ ಆಗೋದು : ಕುಮಾರಸ್ವಾಮಿಗೆ ಗುಟುರು ಹಾಕಿದ 'ಟಗರು'!
ಗೋಹತ್ಯೆ ನಿಷೇಧ ಹಾಗೂ ಲವ್ ಜಿಹಾದ್ ತಡೆ ಕಾನೂನು ಜಾರಿ ಮಾಡುವ ಬಗ್ಗೆ ಬೆಳಗಾವಿಯ ಬಿಜೆಪಿ ರಾಜ್ಯ ಕಾರ್ಯಕಾರಣಿಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಲವ್ ಜಿಹಾದ್ ಕುರಿತು ದಾಖಲಾತಿಗಳನ್ನು ಕಲೆ ಹಾಕಲಾಗುತ್ತಿದೆ. ಮುಂಬರುವ ಬರುವ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಚಿವ ಸಂಪುಟ ವಿಸ್ತರಣೆ ಯಾವಾಗ ಆಗಬೇಕೆಂಬುವುದು ಕೇಂದ್ರ ನಾಯಕರು ಹಾಗೂ ಮುಖ್ಯಮಂತ್ರಿಗಳು ಚರ್ಚಿಸಿ ನಿರ್ಣಯ ಕೈಗೊಳ್ಳುತ್ತಾರೆ. ಉಸ್ತುವಾರಿ ನಾಯಕರು ಸರ್ಕಾರದ ಕುರಿತು ಪತ್ರ ಬರೆದಿದ್ದಾರೆ ಎನ್ನುವುದು ಸತ್ಯಕ್ಕೆ ದೂರವಾದ ವಿಷಯ ಎಂದರು. ಸಿ.ಪಿ. ಯೋಗೇಶ್ವರ್ ಸಚಿವರಾಗುತ್ತಾರೆ ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ ಎಂದು ಈಶ್ವರಪ್ಪ ಹೇಳಿದರು.
ಇನ್ನು, ರಾಜ್ಯದಲ್ಲಿ ಕುರುಬ ಸಮುದಾಯವನ್ನು ಎಸ್‌ಟಿಗೆ ಸೇರಿಸಬೇಕೆಂಬ ಹೋರಾಟ ಪ್ರಾರಂಭವಾಗಿದೆ. ಸ್ವಾಮೀಜಿ ನೇತೃತ್ವದಲ್ಲಿ ಜ. 7 ರಂದು ಕಾಗಿನೆಲೆಯಿಂದ ಪಾದಯಾತ್ರೆ ಕೈಗೊಂಡು, ಫೆಬ್ರವರಿ 1 ರಂದು ಬೆಂಗಳೂರಿನಲ್ಲಿ 10 ಲಕ್ಷ ಜನರನ್ನು ಸೇರಿಸಿ ಎಸ್‌ಟಿ ಮಿಸಲಾತಿಗೆ ಆಗ್ರಹಿಸಿ ಸಮಾವೇಶ ನಡೆಸುತ್ತೇವೆ ಎಂದು ಇದೇ ವೇಳೆ ಅವರು ತಿಳಿಸಿದರು.