ಚಿತ್ರದುರ್ಗ : ಜಿಲ್ಲೆಯ ಹಿರಿಯೂರು ತಾಲೂಕು ಆಸ್ಪತ್ರೆ ಅವ್ಯವಸ್ಥೆಯ ತಾಣವಾಗಿದೆ. ಚಿಕಿತ್ಸೆಗೆಂದು ಬರುವ ಬಡರೋಗಿಗಳಿಗೆ ಸ್ಪಂದಿಸಲು ವೈದ್ಯರೇ ಇರಲ್ಲ ಎಂಬ ದೂರು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಆಸ್ಪತ್ರೆಯಲ್ಲಿ ದಿನವಿಡಿ ಜನ ಕಾದು ಕುಳಿತರೂ ಚಿಕಿತ್ಸೆ ನೀಡಬೇಕಾದ ವೈದ್ಯರು ನಿಗದಿತ ಅವಧಿಗೆ ಆಸ್ಪತ್ರೆಗೆ ಆಗಮಿಸಲ್ಲ ಎಂದು ಹೇಳಲಾಗುತ್ತಿದೆ. ಆಸ್ಪತ್ರೆಯು ಮೂಲಸೌಕರ್ಯಗಳ ಕೊರತೆಯಿಂದ ಬಳಲುತ್ತಿದೆ ಎಂದು ಹಿರಿಯೂರು ನಗರ ನಿವಾಸಿಗಳು ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತದ ಮೇಲೆ ಕೆಂಡಕಾರಿದ್ದಾರೆ.
ಗರ್ಭಿಣಿಯರ ಪರದಾಟ : 100 ಹಾಸಿಗೆಯುಳ್ಳ ಆಸ್ಪತ್ರೆಯಲ್ಲಿ ಎಂಟಕ್ಕೂ ಅಧಿಕ ವೈದ್ಯರು ಕಾರ್ಯನಿರ್ವಹಿಸುತ್ತಿದ್ದರೂ ರೋಗಿಗಳ ಸಂಕಷ್ಟ ಆಲಿಸುವವರ ಗತಿಯಿಲ್ಲ. ಇತ್ತ ವೈದ್ಯರ ಬರುವಿಕೆ ಕುರಿತು ರೋಗಿಗಳು ಪ್ರಶ್ನೆ ಮಾಡಿದ್ರೆ, ಸಿಬ್ಬಂದಿ ಸಬೂಬು ಮಾತು ಹೇಳ್ತಾರಂತೆ. ಹೆರಿಗೆಗೆಂದು ಬಂದ ಗರ್ಭಿಣಿಯರಿಗೆ ವೈದ್ಯರು ಸರಿಯಾಗಿ ಸ್ಪಂದಿಸುವುದಿಲ್ಲ ಎಂಬ ಆರೋಪವಿದೆ.
ಅಲ್ಲದೆ, ಗರ್ಭಿಣಿಯರು ಕುಳಿತುಕೊಳ್ಳಲು ಸರಿಯಾದ ಆಸನ ವ್ಯವಸ್ಥೆ ಕಲ್ಪಿಸಿಲ್ಲ. ವೈದ್ಯರು ಬರುವವರೆಗೂ ರೋಗಿಗಳು ನೋವಿನಿಂದ ಬಳಲುತ್ತಾ ನಿಂತುಕೊಂಡಿರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹೆಚ್ಚಾಗಿ ವೈದ್ಯರ ಕೊಠಡಿಗಳಿಗೆ ಬೀಗ ಹಾಕಿರಲಾಗುತ್ತೆ ಎಂದು ಜನ ದೂರಿದ್ದಾರೆ.
ಓದಿ-ಕೆಡಿಪಿ ಸಭೆಯಲ್ಲಿ ಶಾಸಕ ಸಂಗಮೇಶರನ್ನು ಕಿಚಾಯಿಸಿದ ಸಚಿವ ಈಶ್ವರಪ್ಪ
ಸಂಜೆಯಾದ್ರೆ ರೋಗಿಗಳಿಗೆ ದೇವರೇ ಗತಿ : ಆಸ್ಪತ್ರೆ ಸಿಬ್ಬಂದಿ ಹಾಗೂ ವೈದ್ಯರು ಸಂಜೆಯಾಗುತ್ತಿದ್ದಂತೆ ರೋಗಿಗಳ ಕೈಗೆ ಸಿಗುವುದಿಲ್ಲವಂತೆ. ರಾತ್ರಿ ಸಮಯದಲ್ಲಿ ರೋಗಿಗಳಿಗೆ ಆರೋಗ್ಯದಲ್ಲಿ ಏರುಪೇರಾದ್ರೆ ಕೇಳುವವರೇ ಇಲ್ಲ. ತುರ್ತು ಸಮಯದಲ್ಲಿ ರೋಗಿ ಸಂಬಂಧಿಗಳು ವೈದ್ಯರಿಗೆ ಫೋನ್ ಮಾಡಿದ್ರೆ ಸರಿಯಾಗಿ ಸ್ಪಂದಿಸುವುದಿಲ್ಲ ಎಂದು ರೋಗಿಯ ಸಂಬಂಧಿಕರು ಅಳಲು ತೋಡಿಕೊಳ್ಳುತ್ತಿದ್ದಾರೆ.
ರೋಗಿಗಳಿಗೆ ಕೊಠಡಿಗಳ ಸಮಸ್ಯೆ : ಚಿಕಿತ್ಸೆಗೆಂದು ಬಂದ ರೋಗಿಗಳಿಗೆ ಆಸ್ಪತ್ರೆಗೆಯಲ್ಲಿ ಸೂಕ್ತ ಆಸನ ಹಾಗೂ ಕೊಠಡಿಯ ವ್ಯವಸ್ಥೆ ಇಲ್ಲ. ರೋಗಿಗಳಿಗೆ ಆಸ್ಪತ್ರೆಯ ಕೊಠಡಿ ಮುಂಭಾಗದಲ್ಲಿ ಬೆಡ್ ಹಾಕಿ ಉಪಚರಿಸಲಾಗುತ್ತಿದೆ.
ಈ ಕುರಿತಾಗಿ ಹಲವು ಭಾರಿ ಸಾರ್ವಜನಿಕರು ಮೇಲಾಧಿಕಾರಿಗಳಿಗೆ ಆಸ್ಪತ್ರೆಯ ಅವ್ಯವಸ್ಥೆ ಸರಿ ಪಡಿಸುವಂತೆ ಮನವಿ ಮಾಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೆ, ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿಯೇ ಇರುವುದರಿಂದ ಅಪಘಾತಗಳಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ್ರೆ, ಸ್ಪಂದಿಸುವವರೇ ಇಲ್ಲ.
ಸಿಬ್ಬಂದಿ ವಿರುದ್ಧ ಶಾಸಕಿ ಗರಂ : ತಾಲೂಕು ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ರೋಗಿಯ ಸಂಬಂಧಿಕರು ಶಾಸಕಿ ಪೂರ್ಣಿಮಾ ಅವರಿಗೆ ತಿಳಿಸುತ್ತಿದ್ದಂತೆ, ದಿಢೀರನೆ ನಿನ್ನೆ ತಡರಾತ್ರಿ ಆಸ್ಪತ್ರೆಗೆ ಭೇಟಿ ಮಾಡಿದ್ದಾರೆ. ರಾತ್ರಿ ಸಮಯದಲ್ಲಿ ವೈದ್ಯರು ಇಲ್ಲದಿರುವುದನ್ನು ಕಂಡ ಶಾಸಕಿ ಪೂರ್ಣಿಮಾ ಅಧಿಕಾರಿಗಳ ವಿರುದ್ಧ ಸಿಡಿಮಿಡಿಗೊಂಡಿದ್ದಾರೆ. ವೈದ್ಯರಿಗೆ ಫೋನ್ ಮಾಡಿ ಆಸ್ಪತ್ರೆಗೆ ಬಂದು ಚಿಕಿತ್ಸೆ ನೀಡುವಂತೆ ಸಿಬ್ಬಂದಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಘಟನೆ ಮರುಕಳಿಸಿದ್ರೆ ಕ್ರಮದ ಭರವಸೆ : ಈ ಕುರಿತು ಶಾಸಕಿ ಪೂರ್ಣಿಮಾ ಅವರನ್ನ ಪ್ರಶ್ನೆ ಮಾಡಿದ್ರೆ, ಅವ್ಯವಸ್ಥೆಯ ಕುರಿತು ನನ್ನ ಗಮನಕ್ಕೆ ಬಂದ ಮರುಕ್ಷಣವೇ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ರೋಗಿಗಳ ಕಷ್ಟ ಆಲಿಸಿದ್ದೇನೆ. ಯಾವುದೇ ತೊಂದ್ರೆ ಆಗದಂತೆ ಕ್ರಮಕ್ಕೆ ಮುಂದಾಗಿದ್ದು, ಮತ್ತೆ ಈ ರೀತಿಯ ಘಟನೆ ಮರುಕಳಿಸಿದ್ರೆ ಕ್ರಮಕ್ಕೆ ಮುಂದಾಗುತ್ತೇವೆ ಎಂದು ಹೇಳಿದರು.