ಚಿತ್ರದುರ್ಗ: ತಂಬಾಕು ಉತ್ಪನ್ನಗಳ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧ ಎಂದು ವರ್ಷಗಳಿಂದ ವರ್ತಕರಿಗೆ ಹೇಳಿದ್ದು ಸಾಕು, ಇನ್ನು ಮುಂದೆ ತಂಬಾಕು ಮಾರಾಟ ಮಾಡುವ ಅಂಗಡಿ ಮೇಲೆ ದಾಳಿ ನಡೆಸಿ ಕೇಸ್ ದಾಖಲಿಸಿ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅಧಿಕಾರಿಗಳಿಗೆ ತಾಕೀತು ಮಾಡಿದರು.
ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ತ್ರೈಮಾಸಿಕ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈಗಾಗಲೆ ರಾಜ್ಯದಲ್ಲಿ ಗುಟ್ಕಾ ನಿಷೇಧಿಸಲಾಗಿದ್ದು, ಪಾನ್ ಮಸಾಲ ಮಾರಾಟ ಮಾಡಲು ಮಾತ್ರ ಅವಕಾಶವಿದೆ. ಆದರೆ, ಪಾನ್ ಮಸಾಲ ಹೆಸರಿನಲ್ಲಿ ವಿವಿಧ ಕೋಡ್ ವರ್ಡ್ ಬಳಸಿ ತಂಬಾಕು ಉತ್ಪನ್ನವನ್ನು ಪ್ಯಾಕೆಟ್‍ನಲ್ಲಿರಿಸಿ ನಿಯಮಬಾಹಿರವಾಗಿ ಮಾರಾಟ ಮಾಡುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಕೇಳಿಬರುತ್ತಿವೆ ಎಂದು ಕಿಡಿಕಾರಿದರು.
ಸಂತೆಗಳಲ್ಲಿ, ಸಣ್ಣಪುಟ್ಟ ಕಿರಾಣಿ ಅಂಗಡಿಗಳಲ್ಲಿ, ಪಾನ್‍ಶಾಪ್‍ನಲ್ಲಿ ತಂಬಾಕು ಹಾಗೂ ತಂಬಾಕು ಉತ್ಪನ್ನಗಳ ಮಾರಾಟ ಹೆಚ್ಚಾಗುತ್ತಿದೆ. ತಂಬಾಕು ಮಾರಾಟಕ್ಕೆ ನಿಯಮಗಳಲ್ಲಿ ಅವಕಾಶವೇ ಇಲ್ಲ. ಆದರೆ, ಇದೂವರೆಗೂ ಅಧಿಕಾರಿಗಳು ಇಂತಹ ಯಾವುದೇ ಪ್ರಕರಣವನ್ನು ಪತ್ತೆ ಹಚ್ಚಿ, ಅಂತಹವರ ವಿರುದ್ಧ ಕ್ರಮ ಕೈಗೊಂಡಿಲ್ಲ. ಜಿಲ್ಲೆಯಲ್ಲಿ ಆಹಾರ ಗುಣಮಟ್ಟ ಪರಿಶೀಲನಾ ಅಧಿಕಾರಿಗಳು ಇದ್ದರೂ ಸಹ ಇಂತಹ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.