ಚಿತ್ರದುರ್ಗ: ಆ್ಯಂಬುಲೆನ್ಸ್ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಇಲ್ಲದೇ ಕೋವಿಡ್ ಕೇರ್ ಕೇಂದ್ರಕ್ಕೆ ಸೋಂಕಿತನೋರ್ವ ನಡೆದುಕೊಂಡು ಬಂದಿರುವ ಘಟನೆ ಆರೋಗ್ಯ ಸಚಿವರ ಸ್ವ ಕ್ಷೇತ್ರವಾದ ಮೊಳಕಾಲ್ಮೂರು ತಾಲೂಕಿನ ರಾಂಪುರ ಗ್ರಾಮದಲ್ಲಿ ನಡೆದಿದೆ.
ಶ್ರೀರಾಮುಲು ಕ್ಷೇತ್ರದಲ್ಲೇ ಸೋಂಕಿತರನ್ನು ಕರೆತರಲು ಆ್ಯಂಬುಲೆನ್ಸ್ ಕೊರತೆ ಇದೆಯಾ ಎಂಬ ಶಂಕೆ ಮೂಡಿದೆ. ಆದ್ರೆ ಸೋಂಕಿತ ಯುವಕ ಆ್ಯಂಬುಲೆನ್ಸ್ ಬರುವ ಮುನ್ನವೇ ಕೋವಿಡ್ ಕೇಂದ್ರಕ್ಕೆ ಕಾಲ್ನಡಿಗೆಯಲ್ಲಿ ಬಂದಿದ್ದಾನೆ ಎಂದು ಕೂಡ ಹೇಳಲಾಗುತ್ತಿದೆ.
ಇದೀಗ ಸೋಂಕಿತ ಯುವಕ ಕೋವಿಡ್ ಕೇರ್ ಸೆಂಟರ್ಗೆ ಕಾಲ್ನಡಿಗೆಯಲ್ಲಿ ಹೊರಟಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆರೋಗ್ಯ ಸಚಿವರು ಹಾಗೂ ಅಧಿಕಾರಿಗಳ ವಿರುದ್ಧ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗ್ತಿದೆ.