ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದ ಕವಾಡಿಗರಹಟ್ಟಿ ಬಡಾವಣೆಯ ಕಲುಷಿತ ನೀರು ಸೇವಿಸಿ ಸಂಭವಿಸಿದ ಸಾವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ನಗರಸಭೆಯ ನೀರು ಸರಬರಾಜು ಸಹಾಯಕ ಸಿ ಹೆಚ್ ಪ್ರಕಾಶಬಾಬು ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಘಟನೆ ಕುರಿತು ಸೂಕ್ತ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರಷ್ಟೇ ಆದೇಶ ನೀಡಿದ್ದರು. ಅಲ್ಲದೇ ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥ ಅಧಿಕಾರಿಯನ್ನು ಕೂಡಲೇ ಅಮಾನತು ಮಾಡುವಂತೆಯೂ ಅವರು ಸೂಚನೆ ಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣದ ಗಂಭೀರತೆ ಅರಿತ ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ತತಕ್ಷಣ ಜಾರಿಗೆ ಬರುವಂತೆ ನಗರಸಭೆಯ ನೀರು ಸರಬರಾಜು ಸಹಾಯಕ ಸಿ ಹೆಚ್ ಪ್ರಕಾಶಬಾಬು ಅವರನ್ನು ಅಮಾನತು ಮಾಡಿ ಆದೇಶ ನೀಡಿದ್ದಾರೆ.
ಬಡಾವಣೆಯಲ್ಲಿ ಕಲುಷಿತ ನೀರು ಸೇವಿಸಿ ಮೂವರು ಮೃತಪಟ್ಟಿದ್ದು ಜಿಲ್ಲಾಧಿಕಾರಿ ದಿವ್ಯಪ್ರಭು ಸೇರಿದಂತೆ ಮೃತರ ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿದರು. ಅಲ್ಲದೇ ಪರಿಹಾರದ ಭರವಸೆ ಕೂಡ ನೀಡಿದರು. ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಉಸ್ತುವಾರಿ ಸಚಿವ ಡಿ.ಸುಧಾಕರ್, ಮೃತರ ಕುಟುಂಬಸ್ಥರಿಗೆ 10 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಮೃತ ಮಂಜುಳಾ ಕುಟುಂಬಕ್ಕೆ ಪರಿಹಾರದ ಭರವಸೆ ನೀಡಿದ್ದೇವೆ. ಅಂತ್ಯಕ್ರಿಯೆ ಅವಕಾಶ ಮಾಡಿಕೊಡುವುದಿಲ್ಲವೆಂದು ಪಟ್ಟು ಹಿಡಿದಿದ್ದ ಕುಟುಂಬಸ್ಥರು ಇದೀಗ ಅಂತ್ಯಕ್ರಿಯೆ ನೆರವೇರಿಸಲು ಒಪ್ಪಿದ್ದಾರೆ. ಪ್ರಕರಣದ ಬಗ್ಗೆ ಎಲ್ಲಾ ಆಯಾಮದಲ್ಲೂ ತನಿಖೆ ನಡೆಸಲಾಗುವುದು ಎಂದಿದ್ದಾರೆ.
ಲ್ಯಾಬ್ ವರದಿ ಬರಬೇಕು. ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಕವಾಡಿಗರಹಟ್ಟಿಯ ರಘು ಎಂಬುವರು ಬೆಂಗಳೂರಲ್ಲಿ ಮೃತಪಟ್ಟರೆ, ಇದೇ ಬಡಾವಣೆಯ ಪ್ರವೀಣ್ ದಾವಣಗೆರೆಯಲ್ಲಿ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಇದೆ. ತನಿಖೆ ಮೂಲಕ ಸಾವಿನ ಕಾರಣ ತಿಳಿದು ಬರಬೇಕಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಪರಶುರಾಮ್ ಪ್ರತಿಕ್ರಿಯಿಸಿ, ಕವಾಡಿಗರಹಟ್ಟಿ ಬಡಾವಣೆಯಲ್ಲಿ ಸಂಭವಿಸಿದ ಅನುಮಾನಾಸ್ಪದ ಸಾವುಗಳ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಲ್ಯಾಬ್ ವರದಿ ಬಂದ ಬಳಿಕ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ. ಮೃತರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಪರಿಷತ್ ಸದಸ್ಯ ಕೆ ಎಸ್ ನವೀನ್, ಮೃತರ ಕುಟುಂಬಕ್ಕೆ ವೈಯಕ್ತಿಕವಾಗಿ 50 ಸಾವಿರ ಸಹಾಯಧನ ನೀಡಿದರು. ಘಟನೆ ಬಳಿಕ 17ನೇ ವಾರ್ಡ್ನಲ್ಲಿರುವ ಕೌನ್ಸಿಲರ್ ಜಯಣ್ಣ ನಾಪತ್ತೆಯಾಗಿದ್ದು ಬಡಾವಣೆಯ ನಿವಾಸಿಗರು ಅವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ಲ್ಯಾಬ್ನಿಂದ ಬಂದ ವರದಿ: ಲ್ಯಾಬ್ನಿಂದ ವರದಿ ಬಂದಿದ್ದು ಕುಡಿಯಲು ಯೋಗ್ಯವಲ್ಲದ ನೀರು ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ನೀರು ಕಲುಷಿತಕ್ಕೆ ನಿಖರವಾದ ಕಾರಣವನ್ನು ಕಂಡು ಹಿಡಿಯಲು ಅಸ್ವಸ್ಥಗೊಂಡವರು ಕುಡಿದ ನೀರು, ಮಲ-ಮೂತ್ರ ಮಾದರಿಗಳನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇದರಲ್ಲಿ ಕಾಲರಾ ಮಾದರಿ ಅಂಶ ಪತ್ತೆಯಾಗಿದೆ ಎಂದು ಲ್ಯಾಬ್ ವರದಿ ಹೇಳುತ್ತದೆ. ಇನ್ನು ಪ್ರಕರಣ ಸಂಬಂಧ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬಾಕಿ ಇದೆ.
ವರದಿ ಬಳಿಕ ಸ್ಪಷ್ಟ ಮಾಹಿತಿ: ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕ ಕೆ.ಸಿ.ವಿರೇಂದ್ರ ಪ್ರತಿಕ್ರಿಯಿಸಿ, 151 ಜನರಲ್ಲಿ 41 ಜನ ಸರ್ಕಾರಿ ಆಸ್ಪತ್ರೆಯಲ್ಲಿದ್ದಾರೆ. 110 ಜನ ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ 8 ಜನ ಸದ್ಯ ಡಿಸ್ಚಾರ್ಜ್ ಆಗಿದ್ದಾರೆ. ನಾಳೆ ಡಿಸ್ಚಾರ್ಜ್ ಆಗುವವರ ಸಂಖ್ಯೆ ಹೆಚ್ಚಾಗುತ್ತದೆ. ಘಟನೆಗೆ ಕಾರಣ ತಿಳಿಯಲು ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ಆದರೆ, ಸ್ಥಳೀಯರು ಓರ್ವ ವ್ಯಕ್ತಿಯ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬಂದ ಬಳಿಕ ಈ ಬಗ್ಗೆ ಸ್ಪಷ್ಟ ಮಾಹಿತಿ ಹಾಗೂ ಸತ್ಯ ಹೊರಬೀಳಲಿದೆ. ಸದ್ಯ ಸರ್ಕಾರದಿಂದ ಮೃತ ವ್ಯಕ್ತಿಗಳ ಕುಟುಂಬಸ್ಥರಿಗೆ 10 ಲಕ್ಷ ರೂ. ಪರಿಹಾರ ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರು ಈಗಾಗಲೇ ಹೇಳಿದ್ದಾರೆ. ಅದನ್ನು ಕೊಡಿಸುವಂತಹ ಕೆಲಸ ಮಾಡುತ್ತೇವೆ ಎಂದರು.
ಇದನ್ನೂ ಓದಿ: ಚಿತ್ರದುರ್ಗದ ಕಾವಾಡಿಗರ ಹಟ್ಟಿಯಲ್ಲಿ ಕಲುಷಿತ ನೀರು ಸೇವಿಸಿ ಸಾವು ಪ್ರಕರಣ: ತನಿಖೆಗೆ ಆದೇಶಿಸಿದ ಸಿಎಂ