ಚಿತ್ರದುರ್ಗ: ಜಿಲ್ಲೆಯ ಮುರುಘಾಮಠದ ಆಡಳಿತಾಧಿಕಾರಿ ಎಸ್.ಕೆ. ಬಸವರಾಜನ್ ಎಂಬುವರು ಅಲ್ಲಿನ ಮಹಿಳಾ ನಿಲಯ ಪಾಲಕರ ಮೇಲೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪದ ಮೇಲೆ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಎಸ್ಪಿ ಡಾ. ಕೆ.ಪರಶುರಾಮ್ ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಎಸ್ಪಿ, ಜುಲೈ 24ರಂದು ಇಬ್ಬರು ಬಾಲಕಿಯರು ಮುರುಘಾಮಠದ ವಸತಿ ನಿಲಯದಿಂದ ಗೇಟ್ಪಾಸ್ ಪಡೆದು ಹೊರಗೆ ತೆರಳಿದ್ದರು. ಬಳಿಕ ಅವರಿಬ್ಬರೂ ಬೆಂಗಳೂರಿನ ಕಾಟನ್ಪೇಟೆ ಪೊಲೀಸ್ ಠಾಣೆಯಲ್ಲಿ ಕಂಡುಬಂದಿದ್ದರು. ಆಗ ಅಲ್ಲಿನ ಪೊಲೀಸರು ಮಠಕ್ಕೆ ಈ ಬಗ್ಗೆ ಆಡಳಿತಾಧಿಕಾರಿ ಎಸ್.ಕೆ. ಬಸವರಾಜನ್ ಅವರಿಗೆ ಮಾಹಿತಿ ನೀಡಿದ್ದರು ಎಂದು ಎಸ್ಪಿ ಹೇಳಿದ್ದಾರೆ.
ಆದರೆ ಬಸವರಾಜನ್ ಹಾಗೂ ಆವರ ಪತ್ನಿ ಮರುದಿನ ಬಾಲಕಿಯರನ್ನು ಪೊಲೀಸ್ ಠಾಣೆಯಿಂದ ಕರೆತಂದಿದ್ದು, ಬಳಿಕ ಅಪ್ರಾಪ್ತೆಯರನ್ನು ಪೋಷಕರು ಹಾಗೂ ವಸತಿ ನಿಲಯಕ್ಕೆ ಒಪ್ಪಿಸದೆ ತಮ್ಮ ವಶದಲ್ಲೇ ಇಟ್ಟುಕೊಂಡಿದ್ದರು ಎಂದು ದೂರಲಾಗಿದೆ.
ಅಲ್ಲದೆ, ಬಸವರಾಜನ್ ಅವರು ಮಹಿಳಾ ನಿಲಯದ ಪಾಲಕರೊಂದಿಗೆ ಅಶ್ಲೀಲವಾಗಿ ಮಾತನಾಡುವುದಲ್ಲದೆ, ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಅದಲ್ಲದೆ, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರು ನೀಡಲಾಗಿದೆ. ದೂರಿನ ಮೇರೆಗೆ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಎಸ್ಪಿ ಡಾ. ಕೆ.ಪರಶುರಾಮ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಸಂಬಂಧಿಕನಿಂದಲೇ ಯುವತಿಗೆ ಲೈಂಗಿಕ ಕಿರುಕುಳ: ಸಿಡಿಪಿಒರಿಂದ ಸಂತ್ರಸ್ತೆ ರಕ್ಷಣೆ