ಚಿತ್ರದುರ್ಗ: 'ಕವಾಡಿಗರಹಟ್ಟಿಯ ದುರ್ಘಟನೆ ನಮ್ಮೆಲ್ಲರಿಗೂ ನೋವು ತರಿಸಿದೆ. ಪ್ರಕರಣದ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸಲು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಮೃತ ವ್ಯಕ್ತಿಗಳ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ ನೀಡಲು ತೀರ್ಮಾನ ಮಾಡಲಾಗಿದೆ. ಈಗಾಗಲೇ ಮೂರು ಮಂದಿಯ ಕುಟುಂಬಕ್ಕೆ ತಲಾ 5 ಲಕ್ಷ ಹಣ ಬಿಡುಗಡೆ ಮಾಡಲಾಗಿದೆ' ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಕವಾಡಿಗರಹಟ್ಟಿಯ ಆಸ್ಪತ್ರೆ ಹಾಗೂ ಮೃತ ವ್ಯಕ್ತಿಗಳ ಕುಟುಂಬದವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
'ಈಗಾಗಲೇ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಮೃತ ಮಂಜುಳಾ, ರಘು, ಪ್ರವೀಣ್ ಈ ಮೂರು ಮಂದಿಯ ಕುಟುಂಬಕ್ಕೆ ತಲಾ 5 ಲಕ್ಷ ಹಣ ಬಿಡುಗಡೆ ಮಾಡಲಾಗಿದೆ. ಇಂತಹ ದುರಂತ ಮತ್ತೆ ಪುನರಾವರ್ತನೆ ಆಗಬಾರದು. ಈ ನಿಟ್ಟಿನಲ್ಲಿ ಘಟನೆಗೆ ಕಾರಣವೇನು ಅನ್ನೋದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಇಲಾಖೆಯ ಲೋಪದೋಷವಿದ್ದರೆ ಸರಿಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಮುಂದೇನು ಮಾಡಬೇಕು ಎಂಬುದರ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಚರ್ಚಿಸಲಾಗುವುದು. ಕವಾಡಿಗರಹಟ್ಟಿಯ ಸಮಗ್ರ ಅಭಿವೃದ್ಧಿ ಮಾಡಲು ನಾವು ಸಿದ್ಧ. ಯಾಕೆ ಆಯ್ತು? ಹೇಗೆ ಆಯ್ತು? ಎಂಬುದನ್ನು ವಿಚಾರಣೆ ಕೊಡಲು ಹೇಳಿದ್ದೇವೆ. ಸ್ಪಷ್ಟ ವರದಿ ಬಂದ ಬಳಿಕ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು' ಎಂದರು.
'ತನಿಖಾ ಪೂರ್ವ ಘಟನೆ ಬಗ್ಗೆ ಊಹಾಪೋಹ ಮಾತನಾಡುವುದು ಸರಿ ಅಲ್ಲ. ವರದಿ ಮೂಲಕ ನಿಜಾಂಶ ಹೊರ ಬರಲಿದೆ. ನಾನು ಕೂಡ ವರದಿ ನೋಡಿಲ್ಲ. ಲೋಪ ಯಾರದ್ದೇ ಇರಲಿ, ಕ್ರಮ ಕೈಗೊಳ್ಳಲಾಗುತ್ತದೆ. ಈಗಾಗಲೇ ನಗರಸಭೆ ಅಧಿಕಾರಿ, ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಕಾಲರಾಗೆ ಶೀಘ್ರಗತಿಯಲ್ಲಿ ಚಿಕಿತ್ಸೆ ಪಡೆದರೆ ಅನಾಹುತ ಆಗಲ್ಲ. ಕೆಲವರು ಚಿಕಿತ್ಸೆ ಪಡೆದುಕೊಳ್ಳುವಲ್ಲಿ ವಿಳಂಬ ಮಾಡಿರಬಹುದು. ಹಾಗಾಗಿ ದುರಂತ ಹೆಚ್ಚಾಗಲು ಕಾರಣ ಎಂಬ ಅನುಮಾನ ಕೂಡ ಇದೆ. ಒಟ್ಟಿನಲ್ಲಿ ಈ ಪ್ರಕರಣ ಗಂಭೀರವಾಗಿ ಪರಿಗಣಿಸಲು ನಾವು ಬಂದಿದ್ದೇವೆ. ರಾಜ್ಯದಲ್ಲಿ ಈ ರೀತಿ ನಡೆದ ಎಲ್ಲಾ ಪ್ರಕರಣಗಳನ್ನೂ ಗಂಭೀರವಾಗಿ ಪರಿಗಣಿಸಿದ್ದೇವೆ. ಈ ಪ್ರಕರಣದ ಎಲ್ಲಾ ವರದಿಗಳೂ ಬಹಿರಂಗ ಆಗುತ್ತವೆ' ಎಂದು ಸಚಿವರು ಹೇಳಿದರು.
ಮುತಾಲಿಕ್ ಆರೋಪ: 'ಘಟನೆಗೆ ರಾಜ್ಯ ಸರ್ಕಾರದ ಬೇಜವಾಬ್ದಾರಿಯೇ ಕಾರಣ. ಘಟನೆಯಾಗಿ ಒಂದು ಕಳೆಯಿತು. ಇವತ್ತು ಆರೋಗ್ಯ ಸಚಿವರು ಇಲ್ಲಿಗೆ ಭೇಟಿ ನೀಡಿದ್ದಾರೆ. ಇಂತಹದ್ದೊಂದು ಘಟನೆಯಾದಾಗ ಮೊದಲು ಭೇಟಿ ನೀಡಬೇಕಿರುವುದು ಆರೋಗ್ಯ ಸಚಿವರು. ಆದರೆ, ಸ್ಥಳೀಯ ಶಾಸಕರು ಮುತುವರ್ಜಿ ವಹಿಸಿ ಸಾವು-ನೋವು ತಡೆದಿದ್ದಾರೆ. ಹಾಗಾಗಿ ನಾನು ಅವರಿಗೆ ಅಭಿನಂದನೆ ಸಲ್ಲಿಸುವೆ. ಸರ್ಕಾರಿ ಆಸ್ಪತ್ರೆಯಲ್ಲಿ ಏನೇನು ಇಲ್ಲ ಅನ್ನೋದಕ್ಕೆ ಈ ಜಿಲ್ಲೆಯೇ ಜ್ವಲಂತ ಉದಾಹರಣೆ. ವಾಂತಿ, ಭೇದಿ ಆದರೆ ಚಿಕಿತ್ಸೆ ನೀಡುವಂತಹ ಸಲಕರಣೆಗಳು ಕೂಡ ಸರ್ಕಾರದ ಬಳಿ ಇಲ್ಲ. ಖಾಸಗಿ ಆಸ್ಪತ್ರೆಗೆ ಹೋಗಬೇಕಾಗಿದೆ. ಇಲ್ಲಿ ನಡೆದಿದ್ದು ಸಾವಲ್ಲ, ಕೊಲೆಗಳು. ಸರ್ಕಾರದ ಬೇಜವಾಬ್ದಾರಿಯಿಂದಲೇ ಈ ದುರಂತ ನಡೆದಿದೆ' ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆರೋಪ ಮಾಡಿದರು.
ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಸೇವನೆಯಿಂದ ಮೃತಪಟ್ಟವರ ಸಂಖ್ಯೆ 5ಕ್ಕೆ ಏರಿಕೆಯಾಗಿದ್ದು, ಅಸ್ವಸ್ಥಗೊಂಡ 150ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಲ್ಲಿವರೆಗೂ ಸುಮಾರು 185 ಜನ ಆಸ್ಪತ್ರೆಗೆ ದಾಖಲಾಗಿದ್ದು 25 ಜನ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಕಲುಷಿತ ನೀರನ್ನು ಹಾಗೂ ಅಸ್ವಸ್ಥಗೊಂಡವರ ಆರೋಗ್ಯ ಸ್ಯಾಂಪಲ್ ಪರೀಕ್ಷಿಸಿದಾಗ ನೀರಲ್ಲಿ ಕಾಲರಾ ಮಾದರಿ ಪತ್ತೆಯಾಗಿದೆ. ಕುಡಿಯುವ ನೀರಿನಲ್ಲಿ ಉದ್ದೇಶಪೂರ್ವಕವಾಗಿ ವಿಷ ಬೆರೆಸಲಾಗಿದೆ ಎಂಬುದು ಸ್ಥಳೀಯರ ಆರೋಪವಾಗಿತ್ತು. ಈ ಸಂಬಂಧ ಲ್ಯಾಬ್ ವರದಿಯು ಗುರುವಾರ ಬಂದಿದ್ದು, ನೀರು ಕುಡಿಯಲು ಯೋಗ್ಯವಲ್ಲ ಎಂದು ಚಿತ್ರದುರ್ಗ ಜಿಲ್ಲಾ ಸರ್ವೇಕ್ಷಣಾ ಘಟಕ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಕವಾಡಿಗರಹಟ್ಟಿ ಕಲುಷಿತ ನೀರು ಸೇವನೆ ಪ್ರಕರಣ: ಮೂವರು ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ