ಚಿತ್ರದುರ್ಗ: ಪ್ರಾಣಿಗಳನ್ನು ಹೀನಾಯವಾಗಿ ಕಂಡು ಅನಗತ್ಯವಾಗಿ ಹಿಂಸಿಸುವ ಅದೆಷ್ಟೋ ಜನರ ಮಧ್ಯೆ ಮಗಳಂತೆ ಪ್ರೀತಿಯಿಂದ ಸಾಕಿದ ಮೇಕೆಗೆ ಕುಟುಂಬಸ್ಥರು ಅದ್ಧೂರಿಯಾಗಿ ಸೀಮಂತ ಕಾರ್ಯ ಮಾಡಿದ ಅಪರೂಪದ ಘಟನೆ ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಮದಲ್ಲಿ ನಡೆದಿದೆ.
ಕಳೆದ ಒಂದು ವರ್ಷದಿಂದ ನನ್ನಿವಾಳ ಗ್ರಾಮದ ರಾಜು ಕುಟುಂಬಸ್ಥರು ಮೇಕೆಯನ್ನ ಮಗಳಂತೆ ಸಾಕಿದ್ದಾರೆ. ಇಬ್ಬರು ಹೆಣ್ಣು ಮಕ್ಕಳು ತಂದೆ ರಾಜು ಅವರಿಗೆ ಮೇಕೆಗೆ ಸೀಮಂತ ಮಾಡುವುದಾಗಿ ತಿಳಿಸಿದ್ದಾರೆ. ಮಕ್ಕಳ ಆಸೆಯಂತೆ ರಾಜು ಮೇಕೆಗೂ ಅದ್ಧೂರಿ ಸೀಮಂತ ಮಾಡಿದ್ದು, ಗ್ರಾಮಸ್ಥರೆಲ್ಲರೂ ಸೀಮಂತ ಕಾರ್ಯದಲ್ಲಿ ಭಾಗಿಯಾಗಿದ್ದರು.
ಓರ್ವ ಹೆಣ್ಣು ಮಗಳಿಗೆ ಹೇಗೆ ಸೀಮಂತ ಮಾಡಲಾಗುತ್ತದೆಯೋ ಅದೇ ತೆರನಾಗಿ ರಾಜು ಹಾಗೂ ಕುಟುಂಬಸ್ಥರು ಮೇಕೆಗೂ ವಿಶೇಷವಾಗಿ, ಸಿಂಗರಿಸಿ, ಹೊಸ ಬಟ್ಟೆ ತೊಡಿಸಿದ್ದಾರೆ. ಹೂವು ಹಣ್ಣುಗಳಿಂದ ವಿಶೇಷ ಅಲಂಕಾರ ಮಾಡಿದ್ದಾರೆ. ಅದಲ್ಲದೇ ಗರ್ಭಿಣಿ ಮೇಕೆಗೆ ರಾಜು ಸಂಬಂಧಿಗಳು ಉಡಿತುಂಬಿ, ಆರುತಿ ಎತ್ತಿ, ವಿವಿಧ ಬಗೆಯ ಖಾದ್ಯಗಳನ್ನು ತಿನ್ನಿಸಿದ್ದಾರೆ. ಬಳಿಕ ಸುಮಂಗಲಿಯರಿಂದ ಅರಿಶಿಣ-ಕುಂಕುಮ ಅಕ್ಷತೆ ನೀಡುವ ಮೂಲಕ ಪ್ರಾಣಿ ಪ್ರೇಮ ಮೆರೆದಿದ್ದಾರೆ.
ಅದ್ಧೂರಿಯಾಗಿ ಮೇಕೆ ಸೀಮಂತ ಮಾಡುವ ಮೂಲಕ ಮಾಲೀಕ ರಾಜು ಗ್ರಾಮದಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿದ್ದಾರೆ. ದೂರದ ಊರುಗಳಲ್ಲಿರುವ ತನ್ನ ಸಂಬಂಧಿಕರಿಗೂ ಸೀಮಂತ ಕಾರ್ಯಕ್ಕೆ ಆಹ್ವಾನ ನೀಡಿ ಮಗಳಂತೆ ಸಾಕಿದ ಮೇಕೆಗೂ ಶಾಸ್ತ್ರೋಕ್ತವಾಗಿ ಸೀಮಂತ ಕಾರ್ಯ ನೇರವೇರಿಸಿ ಇತರರಿಗೆ ಮಾದರಿಯಾಗಿದ್ದಾರೆ.
ಈ ಅಪರೂಪದ ಘಟನೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಕಾರಣವಾಗಿದ್ದು, ರಾಜು ಮೇಕೆಯನ್ನ 3ನೇ ಮಗಳಂತೆ ಮೇಕೆಯನ್ನು ಸಾಕಿದ್ದಾರೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.