ಚಿತ್ರದುರ್ಗ: ಆರೋಗ್ಯ ಸಚಿವ ಶ್ರೀರಾಮುಲು ಅವರ ಸ್ವಕ್ಷೇತ್ರದಲ್ಲಿರುವ ಆಸ್ಪತ್ರೆಗಳು ಐಸಿಯುನಲ್ಲಿವೆ. ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗುವ ರೋಗಿಗಳೇ ಆಕ್ಸಿಜನ್ ತರುವ ಪರಿಸ್ಥಿತಿ ನಿರ್ಮಾಣ ಆಗಿದೆ. ಆಕ್ಸಿಜನ್ ಕೊರತೆಯಿಂದಾಗಿ ಈಗಾಗಲೇ ಸಾಕಷ್ಟು ಜನ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.
ಆಕ್ಸಿಜನ್ ಸಮಸ್ಯೆಗೆ ಕೋಟೆನಾಡು ಚಿತ್ರದುರ್ಗದ ಜಿಲ್ಲಾಸ್ಪತ್ರೆ ಸಾಕ್ಷಿಯಾಗಿದೆ. ಇಲ್ಲಿ ಉಸಿರಾಟದ ತೊಂದರೆಯನ್ನು ನೀಗಿಸುವ ಆಕ್ಸಿಜನ್ ಸಮಸ್ಯೆ ಇರುವುದರಿಂದ ರೋಗಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆಸ್ಪತ್ರೆಗೆ ದಾಖಲಾಗುವ ಉಸಿರಾಟದ ತೊಂದರೆ ಇರುವ ರೋಗಿಗಳಿಗೆ ಅವಶ್ಯಕವಾದ ಆಕ್ಸಿಜನ್ ಕೇಳಿದರೆ ತಮ್ಮಲ್ಲಿ ಸಪ್ಲೈ ಇಲ್ಲ ಎಂಬ ಸಿದ್ಧ ಉತ್ತರವನ್ನು ಇಲ್ಲಿನ ಸಿಬ್ಬಂದಿ ನೀಡುವುದು ಸಾಮಾನ್ಯವಾಗಿಬಿಟ್ಟಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಇನ್ನು ಇಲ್ಲಿ ದಾಖಲಾಗುವ ರೋಗಿಗಳು ಖಾಸಗಿಯವರ ಬಳಿ ಹಣ ಕೊಟ್ಟು ಆಕ್ಸಿಜನ್ ತರುವ ಮೂಲಕ ರೋಗಿಗಳಿಗೆ ಚಿಕಿತ್ಸೆ ಪಡೆಯುವ ಪರಿಸ್ಥಿತಿ ನಿರ್ಮಾಣ ಆಗಿದೆ. ಕಳೆದೆರಡು ದಿನಗಳ ಹಿಂದೆ ಹೇಮಾ ರೆಡ್ಡಿ ಎಂಬುವರು ಆಕ್ಸಿಜನ್ ಸಮಸ್ಯೆಯಿಂದ ಕೊನೆಯುಸಿರೆಳೆದಿದ್ದಾರೆ. ಆಸ್ಪತ್ರೆಯಲ್ಲಿ ಆಕ್ಸಿಜನ್ ಸಪ್ಲೈ ಇಲ್ಲದ ಕಾರಣ ಹೇಮಾ ರೆಡ್ಡಿ ಸಂಬಂಧಿಕರು ಖಾಸಗಿಯವರ ಬಳಿ ತೆರಳಿ 337 ರೂಪಾಯಿ ನೀಡುವ ಮೂಲಕ ಆಕ್ಸಿಜನ್ ಖರೀದಿ ಮಾಡಿದ್ದು, ಮೃತ ಹೇಮಾ ರೆಡ್ಡಿಯವರಿಗೆ ಅಳವಡಿಸಿದರೂ ಕೂಡ ಯಾವುದೇ ಪ್ರಯೋಜನ ಆಗಿಲ್ಲ. ಇನ್ನು ಬಸವರಾಜಪ್ಪ ಎಂಬುವವರು ಕೂಡ ಉಸಿರಾಟದ ತೊಂದರೆಯಿಂದಲೇ ಸಾವನ್ನಪ್ಪಿದ್ದು, ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬದವರು ಆರೋಪಿಸಿದ್ದಾರೆ. ಆರೋಗ್ಯ ಸಚಿವರ ನಾಡಲ್ಲಿ ಹೀಗಾದರೆ ಹೇಗೆ ಎಂದು ಸಚಿವ ಶ್ರೀ ರಾಮುಲುಗೆ ಹಿಡಿಶಾಪಾ ಹಾಕಿದ್ದಾರೆ.
ಆಕ್ಸಿಜನ್ ಸಮಸ್ಯೆಯಿಂದ ಬಳಲುತ್ತಿರುವ ಜಿಲ್ಲಾಸ್ಪತ್ರೆಗೆ ಸರ್ಜರಿ ಮಾಡಬೇಕಾಗಿದೆ. ಶ್ರೀರಾಮುಲು ಅವರೇ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಎಲ್ಲಾ ಸಮಸ್ಯೆಗಳನ್ನು ಸರಿದೂಗಿಸುತ್ತೇನೆ ಎಂದು ಆಶ್ವಾಸನೆ ನೀಡಿದ್ದರೂ ಇತ್ತ ತಲೆ ಹಾಕಿಲ್ಲ ಎನ್ನಲಾಗಿದೆ. ಸಾಕಷ್ಟು ಸಮಸ್ಯೆಯಿಂದ ಬಳಲುತ್ತಿರುವ ಜಿಲ್ಲಾಸ್ಪತ್ರೆಯಲ್ಲಿ 125 ಆಕ್ಸಿಜನ್ ಬೆಡ್ಗಳಿದ್ದು, ಅದಕ್ಕೆ ಪೈಪ್ಲೈನ್ ಮಾಡಲಾಗಿದೆಯಂತೆ. ಅದ್ದರಿಂದ ನಮ್ಮ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಮಸ್ಯೆ ಇಲ್ಲ, ಹಾಗೇನಾದರೂ ಸಮಸ್ಯೆ ಇದ್ದಲ್ಲಿ ಡಿಎಸ್ ಬಳಿ ಚರ್ಚಿಸಿ ಬಗೆಹರಿಸುತ್ತೇವೆ ಎಂದು ಜಿಲ್ಲಾ ಆರೋಗ್ಯಧಿಕಾರಿ ತಿಳಿಸಿದ್ದಾರೆ.