ಚಿತ್ರದುರ್ಗ: ಗ್ರಾಮೀಣ ಭಾಗದ ಜನರ ಸಂಕಷ್ಟಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಇಂದು ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿಯವರು ಕಣಕುಪ್ಪೆಯಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದಾರೆ.
'ಜಿಲ್ಲಾಧಿಕಾರಿಗಳ ನಡೆ ಗ್ರಾಮ ವಾಸ್ತವ್ಯದ ಕಡೆ' ಎಂಬ ಸರ್ಕಾರದ ಆದೇಶದ ಅನ್ವಯ ಇಂದು ಜಿಲ್ಲಾಧಿಕಾರಿಗಳು ಮೊಳಕಾಲ್ಮೂರು ತಾಲೂಕಿನ ಕಣಕುಪ್ಪೆ ಗ್ರಾಮದಲ್ಲಿ ಉಳಿದುಕೊಂಡಿದ್ದಾರೆ. ಕುಡಿಯುವ ನೀರು, ವಿದ್ಯುತ್ ಸಂಪರ್ಕ ಸೇರಿದಂತೆ ಗ್ರಾಮದ ಜನರ ಸಂಕಷ್ಟಕ್ಕೆ ಸ್ಪಂದಿಸುವ ಕಾರ್ಯ ಮಾಡುತ್ತಿದ್ದಾರೆ.
ಜಿಲ್ಲೆಯ ಗಡಿ ಗ್ರಾಮದ ಜನರ ಅಭಿವೃದ್ಧಿಗೆ ಒತ್ತು ನೀಡುವುದಾಗಿ ಗ್ರಾಮಸ್ಥರಿಗೆ ಡಿಸಿ ಭರವಸೆ ನೀಡಿದ್ದಾರೆ. ಅಲ್ಲದೆ, ಮೂಲಸೌಕರ್ಯ ಸಮಸ್ಯೆಗಳು ಕಂಡು ಬಂದರೆ ತಮ್ಮ ಗಮನಕ್ಕೆ ತರುವಂತೆ ಮನವಿ ಮಾಡಿದ್ದಾರೆ. ಗಡಿ ಗ್ರಾಮ ಕಣಕುಪ್ಪೆಯಲ್ಲಿ ಹಲವು ವರ್ಷಗಳಿಂದ ಬಸ್ ಸೌಕರ್ಯವಿಲ್ಲ ಎಂದು ತಿಳಿದು ಎರಡು ವೇಳೆ ಗ್ರಾಮಕ್ಕೆ ಬಸ್ ಬಿಡುವುದಾಗಿ ಆಶ್ವಾಸನೆ ನೀಡಿದ್ದಾರೆ. ಬಳಿಕ ಗ್ರಾಮದ ಅಂಗನವಾಡಿ ಕೇಂದ್ರ, ರಸ್ತೆ, ಗ್ರಾಮದ ನೈರ್ಮಲೀಕರಣದ ಕುರಿತು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿ ಕವಿತಾ, ಗ್ರಾಮದಲ್ಲಿನ ಸಮಸ್ಯೆಗಳ ಕುರಿತು ಜನರು ಗಮನಕ್ಕೆ ತಂದಿದ್ದಾರೆ. ಗರ್ಭಿಣಿಯರಿಗೆ ಉಡಿ ತುಂಬುವ ಕಾರ್ಯಕ್ರಮ ನೆರವೇರಿಸಿ ಅವರ ಆರೋಗ್ಯ ಸ್ಥಿತಿಗತಿ ವಿಚಾರಣೆ ಮಾಡಲಾಗಿದೆ ಎಂದು ಹೇಳಿದರು.