ಚಿತ್ರದುರ್ಗ : ಅಪಘಾತಕ್ಕೀಡಾಗಿ ಮೃತಪಟ್ಟ ತಂಗಿಯ ಶವವನ್ನ ಬೆಂಗಳೂರಿನ ಆಸ್ಪತ್ರೆಯಿಂದ ಊರಿಗೆ ತರುತ್ತಿದ್ದ ಅಣ್ಣನೂ ಮಾರ್ಗಮಧ್ಯೆ ದುರಂತ ಅಂತ್ಯ ಕಂಡಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಚಲಿಸುತ್ತಿದ್ದ ಟಿಪ್ಪರ್ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಒರ್ವ ವ್ಯಕ್ತಿ ಮೃತಪಟ್ಟಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ತಡ ರಾತ್ರಿ ನಡೆದಿದೆ.
ಹಾವೇರಿ ಜಿಲ್ಲೆಯ ಹಿರೇಕೆರೂರಿನ ರಾಮು ಮುದ್ದಿಗೌಡರ್ (56) ಮೃತ ವ್ಯಕ್ತಿ. ಚಲಿಸುತ್ತಿದ್ದ ಟಿಪ್ಪರ್ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ರಾಮು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಹಿರಿಯೂರು ತಾಲೂಕು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಬದುಕಲಿಲ್ಲ.
ಅಪಘಾತಕ್ಕೀಡಾಗಿ ಮೃತಪಟ್ಟ ತಂಗಿ ರೇಣುಕಾಳ ಶವವನ್ನ ಬೆಂಗಳೂರಿನ ಆಸ್ಪತ್ರೆಯಿಂದ ಊರಿಗೆ ತರುತ್ತಿದ್ದ ಅಣ್ಣ ರಾಮು ದುರಂತ ಅಂತ್ಯ ಕಂಡಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ರೇಣುಕಾಳ ಸಾವಿನ ಸುದ್ದಿಯನ್ನೇ ಅರಗಿಸಿಕೊಳ್ಳದೆ ಕಣ್ಣೀರು ಹಾಕುತ್ತಿದ್ದ ಕುಟುಂಬ ರಾಮು ಸಾವಿನ ಸುದ್ದಿ ಕೇಳಿ ಕಂಗಾಲಾಗಿದೆ.
ಹಾವೇರಿ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿದ್ದ ರಾಮು, ಹಿರೇಕೆರೂರು ತಾಲೂಕು ವಿಜಯ ಕರ್ನಾಟಕ ದಿನಪತ್ರಿಕೆಯ ವರದಿಗಾರರಾಗಿ ಕೆಲಸ ಮಾಡುತ್ತಿದ್ದರು. ಜತೆಗೆ ಹಿರೇಕೆರೂರ ತಾಲೂಕು ಕಸಾಪ ಅಧ್ಯಕ್ಷರಾಗಿದ್ದ ರಾಮು, ಹಿರೇಮೊರಬ ಗ್ರಾಮದ ವಿಎಸ್ಎಸ್ ಬ್ಯಾಂಕ್‌ನ ಅಧ್ಯಕ್ಷರಾಗಿ, ಹಿರೇಕೆರೂರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿ ಮಂಡಳಿ ಸದಸ್ಯರಾಗಿ ಕೆಲಸ ಮಾಡುತ್ತಿದ್ದರು. ಘಟನೆ ಸಂಬಂಧ ಹಿರಿಯೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಸಹಾಯ ಮಾಡುವ ಹೃದಯ ಶ್ರೀಮಂತಿಕೆ.. ವಿಶೇಷಚೇತನ ಭಿಕ್ಷುಕನಿಗೆ ಹೊಸಜೀವನ ನೀಡಿದ ವಿದ್ಯಾರ್ಥಿ..