ಚಿತ್ರದುರ್ಗ: ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿಗಳಲ್ಲಿ ದರೋಡೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಭಯಭೀತರಾಗಿದ್ದಾರೆ. ಕಳೆದ ಹದಿನೈದು ದಿನಗಳಲ್ಲಿ 6 ದರೋಡೆ ಪ್ರಕರಣಗಳು ದಾಖಲಾಗಿವೆ. ಭರಮಸಾಗರ ಬಳಿ ಲಕ್ಷಾಂತರ ಮೌಲ್ಯದ ವಸ್ತುಗಳ ದರೋಡೆ ನಡೆದಿದೆ. ಲಾರಿ ಚಾಲಕ ಮತ್ತು ಕ್ಲೀನರ್ನ ಕೈಕಾಲು ಕಟ್ಟಿ 64 ಲಕ್ಷ ರೂ. ಮೌಲ್ಯದ ಮೊಬೈಲ್, ಲ್ಯಾಪ್ ಟಾಪ್, ವೆಬ್ ಕ್ಯಾಂ ಸೇರಿ ಹಲವು ಇಲೆಕ್ಟ್ರಾನಿಕ್ ವಸ್ತುಗಳನ್ನು ದೋಚಿದ್ದಾರೆ. ಕಳೆದ 6 ದಿನಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ತಿಂಗಳು ಕೂಡಾ ಮತ್ತೊಂದು ಖದೀಮರ ಗ್ಯಾಂಗ್ ಗುಟ್ಕಾ ಲಾರಿ ಹೈಜಾಕ್ ಮಾಡಿ ದರೋಡೆ ನಡೆಸಿತ್ತು. 19.77 ಲಕ್ಷ ಮೌಲ್ಯದ ಗುಟ್ಕಾ ಎಗರಿಸಿದ್ದ 4 ಮಂದಿಯ ಗ್ಯಾಂಗ್ಅನ್ನು ಭರಮಸಾಗರ ಪೊಲೀಸರು ಹೆಡೆಮುರಿ ಕಟ್ಟಿದ್ದರು. ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಕಳೆದೊಂದು ತಿಂಗಳಲ್ಲಿ 2 ದರೋಡೆ ಪ್ರಕರಣ ದಾಖಲಾಗಿವೆ. ದೊಡ್ಡಸಿದ್ದವ್ವನಹಳ್ಳಿ ಬಳಿ ಲಾರಿ ಚಾಲಕನಿಗೆ ಚಾಕು ತೋರಿಸಿ ಮೊಬೈಲ್, ಹಣ ಕಿತ್ತುಕೊಂಡಿದ್ದರು. ಮಲ್ಲಾಪುರ ಬಳಿ ಕಾರಿನಲ್ಲಿದ್ದ ಇಬ್ಬರು ಪ್ರೇಮಿಗಳಿಗೆ ಚಾಕು, ಲಾಂಗ್ ತೋರಿಸಿ ಲ್ಯಾಪ್ಟಾಪ್, 2 ಮೊಬೈಲ್, ಹಣ ಎಗರಿಸಿದ್ದರು. ಈ ಎರಡು ಗ್ಯಾಂಗನ್ನು ಚಿತ್ರದುರ್ಗ ಗ್ರಾಮಾಂತರ ಪೊಲೀಸರು ಸದೆಬಡಿದಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ: ಮಲಗಿದ್ದ ತಾಯಿ, ಮಗಳ ಮೇಲೆ ಕುಸಿದ ಗೋಡೆ
ಇನ್ನೂ ಕ್ಯಾದಿಗೆರೆ ಬಳಿ ದರೋಡೆಗೆ ಹೊಂಚು ಹಾಕಿದ್ದ ಮತ್ತೊಂದು ಗ್ಯಾಂಗ್ಅನ್ನು ಸಹ ಪೊಲಿಸರು ಅರೆಸ್ಟ್ ಮಾಡಿದ್ದಾರೆ. ದರೋಡೆ ನಿಯಂತ್ರಣಕ್ಕೆ ಸಾರ್ವಜನಿಕರಿಂದ ಒತ್ತಾಯ ಕೇಳಿಬಂದಿದ್ದು, ಹೈವೇಯಲ್ಲಿ ಪೆಟ್ರೋಲಿಂಗ್ ಗಸ್ತು ಹೆಚ್ಚಿಸಿ ಕ್ರಮ ಕೈಗೊಳ್ಳಲಾಗಿದೆ.