ಚಿತ್ರದುರ್ಗ: ಗ್ರಾಮದಲ್ಲಿ ಪ್ರಥಮ ಬಾರಿಗೆ ಜೋಡೆತ್ತಿನ ಗಾಡಿ ಸ್ಪರ್ಧೆ ಏರ್ಪಡಿಸಿದ್ದರು. ಶಿವರಾತ್ರಿ ಹಬ್ಬದ ಸಂಭ್ರಮ ಗ್ರಾಮದಲ್ಲಿ ಮೊಳಗಿತ್ತು. ಸಾವಿರಾರು ರೂಪಾಯಿ ಖರ್ಚು ಮಾಡಿ, ಸ್ಪರ್ಧೆ ಆಯೋಜನೆ ಒಂದೆಡೆಯಾದರೆ ಇತ್ತ ಒಂದು ಘಟನೆ ಸ್ಪರ್ಧೆಗೆ ದುರಂತ ಕಪ್ಪು ಚುಕ್ಕೆ ತಂದಂತಾಯಿತು.
ಹುರಿದುಂಬಿ ಓಡುತ್ತಿರುವ ಎತ್ತುಗಳು, ಸಿಳ್ಳೆ ಚಪ್ಪಾಳೆ ಮೂಲಕ ಎತ್ತುಗಳ ಓಟಗಳಿಗೆ ಪ್ರೋತ್ಸಾಹಿಸುತ್ತಿರುವ ಜನತೆ, ಇನ್ನೊಂದೆಡೆ ತಬ್ಬಿಬ್ಬಾಗಿ ಓಡಾಡುತ್ತಿರುವ ವೀಕ್ಷಕ ಮಂದಿ ಹೌದು, ಎಲ್ಲ ದೃಶ್ಯಗಳಿಗೆ ಕಂಡಿದ್ದು, ಹಿರಿಯೂರು ತಾಲೂಕಿನ ಸೊಂಡೆಕೆರೆ ಗ್ರಾಮದಲ್ಲಿ. ಶಿವರಾತ್ರಿ ಪ್ರಯುಕ್ತ ಪ್ರಥಮ ಬಾರಿಗೆ ಗ ಎತ್ತುಗಳ ಓಟದ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಲು ಅಕ್ಕಪಕ್ಕ ಜಿಲ್ಲೆಯ ನೂರಾರು ಜೋಡೆತ್ತುಗಳು ಆಗಮಿಸಿದ್ದವು. ಇನ್ನೇನು ಅರ್ಧಗಂಟೆ ಕಳೆದರೆ ಸಾಕು ಸ್ಪರ್ಧೆ ಅಂತ್ಯಗೊಂಡು ಕಾರ್ಯಕ್ರಮ ಯಶಸ್ವಿಯಾಗುತ್ತದೆ ಅಂದುಕೊಂಡವರಿಗೆ ಒಂದು ಘಟನೆ ಕಪ್ಪು ಚುಕ್ಕೆಯಂತಾಗಿ ಇಡಿ ಸ್ಪರ್ಧೆ ರದ್ದುಗೊಂಡಿದೆ.
ಎರಡು ಜೋಡೆತ್ತುಗಳ ಸ್ಪರ್ಧೆಗೆ ಚಾಲನೆ ನೀಡಿದ ಕೆಲವೇ ಸೆಕೆಂಡುಗಳಲ್ಲಿ ಒಂದು ಎತ್ತಿನಗಾಡಿ ನೆರೆದಿದ್ದ ಪ್ರೇಕ್ಷಕರ ಮೇಲೆ ಎಗರಿ ದುರಂತಕ್ಕೆ ಕಾರಣವಾಯಿತು. ಅಡ್ಡಲಾಗಿ ಓಡಿ ಬಂದ ಎತ್ತಿನಗಾಡಿ ಹತ್ತಕ್ಕೂ ಅಧಿಕ ಜನರ ಮೇಲೆ ನುಗ್ಗಿತ್ತು. ಪರಿಣಾಮ ಮೂವರಿಗೆ ಗಂಭೀರ ಗಾಯವಾಗಿ ಆಸ್ಪತ್ರೆ ಪಾಲಾದ್ರು. ಏಕಾಏಕಿ ನುಗ್ಗಿದ ಎತ್ತಿನಗಾಡಿಗೆ ಜನರಲ್ಲಿ ಭಯ ಉಂಟಾಯಿತು. ಪೊಲೀಸ್ ಇಲಾಖೆಯ ಅನುಮತಿ ಪಡೆಯದೆ ಸ್ಫರ್ಧೆ ಆಯೋಜನೆ ಮಾಡಲಾಗಿತ್ತು ಎಂದು ಸ್ಥಳದಲ್ಲಿದ್ದ ಪೊಲೀಸರು ಅಂತಿಮವಾಗಿ ಸ್ಪರ್ಧೆ ರದ್ದುಗೊಳಿಸಿದರು.
ನೂರಾರು ಮಂದಿಗೆ ಮನರಂಜನೆ ನೀಡುತ್ತಿದ್ದ ಎತ್ತಿನ ಓಟ, ಆಯೋಜಕರ ಎಡವಟ್ಟಿನಿಂದ ಆವಾಂತರಕ್ಕೆ ಕಾರಣವಾಯಿತು. ಘಟನೆಯಿಂದ ಸ್ಪರ್ಧೆ ನೋಡಲು ಬಂದ ಪ್ರೇಕ್ಷಕರಲ್ಲಿ ಬೇಸರ ಉಂಟು ಮಾಡಿತು. ಕಾರ್ಯಕ್ರಮ ಆಯೋಜನೆಗೂ ಮುನ್ನ ಮುಂಜಾಗ್ರತೆ ಕ್ರಮ ವಹಿಸದಿರುವುದು ಘಟನೆಗೆ ಕಾರಣವಾಗಿದೆ ಎನ್ನಲಾಗಿದೆ.