ಚಿತ್ರದುರ್ಗ: ಜಿಲ್ಲೆಯ ಚಳ್ಳಕೆರೆ ತಾಲೂಕಿನ ಎನ್.ದೇವರಹಳ್ಳಿ ಕೇಳಿಬಂದ ಅಂತರ್ಜಾತಿ ದಂಪತಿಯ ಬಹಿಷ್ಕಾರ ಆರೋಪ ಪ್ರಕರಣ ಇದೀಗ ಸುಖಾಂತ್ಯ ಕಂಡಿದೆ. ಬೇರೆ ಬೇರೆ ಜಾತಿಯಾಗಿದ್ದರೂ ವಿವಾಹವಾಗಿದ್ದಾರೆ ಎಂದು ಸಾವಿತ್ರಮ್ಮ ಮತ್ತು ಮಣಿಕಂಠ ಎಂಬ ದಂಪತಿಯನ್ನು ಗ್ರಾಮದಿಂದ ಬಹಿಷ್ಕಾರ ಹಾಕಿರುವ ಆರೋಪ ಕೇಳಿ ಬಂದಿತ್ತು.
ಬಹಿಷ್ಕಾರ ಹಾಕಿದ್ದ ಸಮುದಾಯದ ಮುಖಂಡರ ಜೊತೆ ಇಂದು ಜಾಗೃತಿ ಸಭೆ ನಡೆಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು, ದಂಪತಿಯನ್ನು ತಮ್ಮ ಮಗುವಿನ ಜೊತೆ ಮತ್ತೆ ಮರಳಿ ಮನೆಗೆ ಕಳುಹಿಸುವ ಮೂಲಕ ಪ್ರಕರಣ ತಿಳಿಗೊಳಿಸಿದ್ದಾರೆ. ಈ ವೇಳೆ ನೆರೆದ ಗ್ರಾಮಸ್ಥರು ಅಧಿಕಾರಿಗಳಿಗೆ ಸಾಥ್ ನೀಡಿ, ಪ್ರಕರಣ ಸುಖಾಂತ್ಯಗೊಳ್ಳಲು ನೆರವಾಗಿದ್ದಾರೆ.
''ವಾಕ್-ಶ್ರವಣ ದೋಷ ಹೊಂದಿರುವ ಎನ್.ದೇವರಹಳ್ಳಿಯ ಸಾವಿತ್ರಮ್ಮ ಮತ್ತು ಆಂಧ್ರ ಮೂಲದ ಮಣಿಕಂಠ ಅದು ಹೇಗೋ ಪ್ರೀತಿಯಲ್ಲಿ ಬಿದ್ದಿದ್ದರು. ಬಳಿಕ ತಮ್ಮಿಷ್ಟದಂತೆ ಮದುವೆ ಸಹ ಆಗಿದ್ದರು. ಆದರೆ, ಮದುವೆಯಾಗಿ ದೇವರಹಳ್ಳಿಗೆ ಬಂದಿದ್ದ ದಂಪತಿಯನ್ನು ಸಮುದಾಯದ ಮುಖಂಡರು ಗ್ರಾಮದಿಂದ ಬಹಿಷ್ಕಾರ ಹಾಕಿದ್ದರು. ಬೇರೆ ದಾರಿ ಕಾಣದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ವಾಸವಿದ್ದರು. ಓದಿಕೊಂಡಿದ್ದ ಸಾವಿತ್ರಮ್ಮ ಮತ್ತು ಮಣಿಕಂಠ ಕಳೆದ ಮೂರು ವರ್ಷಗಳಿಂದ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿಯೇ ಕೆಲಸ ಮಾಡುತ್ತಿದ್ದರು. ದಂಪತಿಗೆ ಇತ್ತೀಚೆಗೆ ಮಗು ಕೂಡ ಆಗಿದ್ದು ಮತ್ತೆ ತಮ್ಮ ಊರಿನತ್ತ ಹೆಜ್ಜೆ ಹಾಕಿದ್ದರು. ಆದರೆ, ಅವರನ್ನು ಕೆಲವರು ಊರಿನಲ್ಲಿ ಸೇರಿಸಿಕೊಂಡಿರಲಿಲ್ಲ.''
''ದಂಡದ ರೂಪದಲ್ಲಿ ಇವರಿಂದ ಹಣ ಕೂಡ ಪಡೆಯಲಾಗಿದೆ. ಆದರೆ, ಒಂದು ತಿಂಗಳ ಮಗುವಿನ ಜೊತೆ ಇತ್ತೀಚೆಗೆ ಮತ್ತೆ ಮನೆಗೆ ಹೋದರೆ ಗ್ರಾಮಸ್ಥರು ಇವರನ್ನು ಊರಿನೊಳಗೆ ಬಿಟ್ಟುಕೊಂಡಿರಲಿಲ್ಲ. ವಾಕ್-ಶ್ರವಣ ದೋಷ ಹೊಂದಿರುವ ಇವರಿಗೆ ತಿಳಿವಳಿಕೆ ಇರುವ ಸಮಾಜ ಸಹಕಾರ ನೀಡಬೇಕು. ಆದರೆ, ಇಷ್ಟು ಮುಂದುವರೆದರೂ ಜಾತಿಯನ್ನು ಮುಂದಿಟ್ಟುಕೊಂಡು ಮಾತು ಮತ್ತು ಕಿವಿ ಕೇಳದ ಇವರನ್ನು ಗ್ರಾಮದಿಂದ ಹೊರ ಹಾಕಿದ್ದಾರೆ. ಇದು ಎಷ್ಟು ಸರಿ?'' ಎಂದು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸಾಮಾಜಿಕ ಹೋರಾಟಗಾರ್ತಿ ತುಳಸಿ ರಮೇಶ್ ಸೇರಿದಂತೆ ಹಲವರು ವಿಡಿಯೋ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದರು.
''ಇಂತಹದ್ದೊಂದು ಘಟನೆ ನಡೆದಿದೆ ಎಂಬ ಸುದ್ದಿ ಗೊತ್ತಾಗುತ್ತಿದ್ದಂತೆ ಅವರನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ಕರೆದುಕೊಂಡು ಬರಲಾಗಿದೆ. ಬಹಿಷ್ಕಾರ ಹಾಕಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು'' ಮತ್ತೊಬ್ಬ ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಆಗ್ರಹ ಮಾಡಿದ್ದರು.
ಈ ವಿಚಾರ ತಿಳಿಯುತ್ತಿದ್ದಂತೆ ಸಾವಿತ್ರಮ್ಮ ಮತ್ತು ಮಣಿಕಂಠ ದಂಪತಿಯನ್ನು ತಮ್ಮ ಜೊತೆಗೆ ಕರೆದುಕೊಂಡ ಬಂದ ಅಧಿಕಾರಿಗಳು, ಸಮುದಾಯದ ಮುಖಂಡರ ಜೊತೆ ಸಮಕ್ಷಮ ಸಭೆ ನಡೆಸಿ ದಂಪತಿಯನ್ನು ಮನಗೆ ಕಳಿಸಿ ಕೊಡುವ ಮೂಲಕ ಪ್ರಕರಣವನ್ನು ಸುಖಾಂತ್ಯಗಳಿಸಿದರು. ತಾಲೂಕು ತಹಶೀಲ್ದಾರ್ ರೆಹಾನ್ ಪಾಷಾ, ಇಓ ಹೊನ್ನಯ್ಯ, ಸಿಪಿಐ ಸಮೀವುಲ್ಲಾ, ಸ್ಥಳೀಯ ಪೊಲೀಸರು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಈ ವೇಳೆ ಹಾಜರಿದ್ದರು.
ಇದನ್ನೂ ಓದಿ: ಹೊನ್ನಾವರದಲ್ಲಿ 2 ಕುಟುಂಬಕ್ಕೆ 6 ವರ್ಷದಿಂದ ಸಾಮಾಜಿಕ ಬಹಿಷ್ಕಾರ.. ನ್ಯಾಯಕ್ಕಾಗಿ ಜಿಲ್ಲಾಡಳಿತದ ಮೊರೆಹೋದ ಸಂತ್ರಸ್ತರು