ಚಿತ್ರದುರ್ಗ: ಹಿಂದೂ ಮಹಾಗಣಪತಿ ನಿಮಜ್ಜನ ವೇಳೆ ಬನಾಯಿಂಗೇ ಮಂದಿರ್ ಹಾಡು ಹಾಕದಂತೆ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ನಿರ್ಬಂಧ ಹೇರಿ ಆದೇಶ ಹೊರಡಿಸಿದ್ದಾರೆ.
ಸೆ.19 ರಿಂದ ಅಕ್ಟೋಬರ್ 1 ರವರೆಗೆ ಈ ಹಾಡು ಬಳಸದಂತೆ ಆದೇಶ ಹೊರಡಿಸಲಾಗಿದ್ದು, ಹಿಂದೂ ಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಈ ಕ್ರಮಕ್ಕೆ ಹಿಂದೂ ಮಹಾಗಣಪತಿ ಅಯೋಜಕರಿಂದ ವಿರೋಧ ವ್ಯಕ್ತವಾಗುತ್ತಿದ್ದು, ವಿಶ್ವ ಹಿಂದೂ ಪರಿಷತ್, ಬಜರಂಗದಳ ಸೇರಿ ಹಿಂದೂ ಪರ ಸಂಘಟನೆಗಳ ಸದಸ್ಯರು ಕೆಂಡಾಂಡಲರಾಗಿದ್ದಾರೆ.
ಸೆ.21 ರಂದು ನಡೆಯಲಿರುವ ಹಿಂದು ಮಹಾಗಣಪತಿ ಬೃಹತ್ ಶೋಭಾಯಾತ್ರೆಯಲ್ಲಿ ಹಾಡು ಹಾಕಲು ನಿಷೇಧ ಹೇರಿದ್ದರಿಂದ ಆಗಮಿಸುವ ಯುವಕರಿಗೆ ನಿರಾಸೆಯಾಗಲಿದೆ.ಇನ್ನು ನಗರದಲ್ಲಿ ನಡೆಯುವ ಶೋಭಾಯಾತ್ರೆಗೆ ರಾಜ್ಯ, ಹೊರ ರಾಜ್ಯದ ಲಕ್ಷಾಂತರ ಜನ ಸೇರುವುದರಿಂದ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಧಿಕಾರಿ ಈ ಕ್ರಮಕ್ಕೆ ಮುಂದಾಗಿದ್ದಾರೆ. ಆದ್ರೆ, ಹಾಡಿಗೆ ಹೇರಿರುವ ನಿಷೇಧ ವಾಪಸ್ ಪಡೆಯುವಂತೆ ಸಂಘಟನೆಗಳು ಆಗ್ರಹಿಸಿವೆ.
ಇನ್ನು ಕೋಟೆ ನಾಡು ಸಂಪೂರ್ಣ ಕೇಸರಿಮಯವಾಗಿದ್ದು, ನಿಮಜ್ಜಕ್ಕೆ ಆಗಮಿಸುವ ಜನರನ್ನು ಸ್ವಾಗತಿಸಲು ಬೃಹತ್ ಫ್ಲೆಕ್ಸ್ಗಳನ್ನು ಹಾಕಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಇಲಾಖೆಯಿಂದ ಬಂದೋಬಸ್ತ್ ಮಾಡಲಾಗಿದೆ. ಹಿಂದೂ ಮಹಾಗಣಪತಿ ನಿಮಜ್ಜನ ಕಾರ್ಯಕ್ರಮ ಪ್ರಯುಕ್ತ ಇಂದು ಬೈಕ್ ರ್ಯಾಲಿ ಸಹ ಹಮ್ಮಿಕೊಳ್ಳಲಾಗಿತ್ತು.