ಚಿತ್ರದುರ್ಗ : ಆಕಸ್ಮಿಕವಾಗಿ ಬೆಂಕಿ ಬಿದ್ದು ಬಾಳೆ ತೋಟ ಸಂಪೂರ್ಣ ಸುಟ್ಟು ಕರಕಲಾಗಿರುವ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನ ಎವಿ ಕೊಟ್ಟಿಗೆ ಗ್ರಾಮದಲ್ಲಿ ನಡೆದಿದೆ.
ರೈತ ವೀರಣ್ಣ ತನ್ನ 6 ಎಕರೆ ಜಮೀನಿನಲ್ಲಿ ಗುಣಮಟ್ಟದ ಔಷಧಿ, ಗೊಬ್ಬರ ಹಾಕಿ 3 ಸಾವಿರ ಬಾಳೆ ಗಿಡಗಳನ್ನು ಬೆಳೆಸಿದ್ದರು. ಶ್ರಮಕ್ಕೆ ತಕ್ಕ ಹಾಗೆ ಫಸಲು ಕೂಡ ಚೆನ್ನಾಗಿ ಬಂದಿತ್ತು. ಆದ್ದರಿಂದ, ಒಳ್ಳೆ ನಿರೀಕ್ಷೆ ಕೂಡ ಮಾಡಲಾಗಿತ್ತು. ಮೊದಲ ಅವಧಿಯಲ್ಲಿ 5 ಲಕ್ಷ ರೂಪಾಯಿ ಆದಾಯವನ್ನೂ ಕಂಡಿದ್ದರು.
2ನೇ ಅವಧಿಗೆ ಬಾಳೆ ಗಿಡಗಳು ಗೊನೆ ಒಡೆದು ಕಟಾವಿಗೆ ಕೆಲವು ತಿಂಗಳು ಬಾಕಿ ಇತ್ತು. ಆದರೆ, ಪಕ್ಕದ ಜಮೀನು ಮಾಲೀಕನ ನಿರ್ಲಕ್ಷದಿಂದ ನೋಡು ನೋಡುತ್ತಿದ್ದಂತೆಯೇ ಬೆಂಕಿಯ ರೌದ್ರಾವತಾರಕ್ಕೆ ಒಂದೇ ಒಂದು ಗಂಟೆಯಲ್ಲಿ ತೋಟದಲ್ಲಿದ್ದ ಬಾಳೆ ಗಿಡಗಳು ರೈತನ ಕಣ್ಮುಂದೆ
ಬೆಂಕಿಯಲ್ಲಿ ಬೆಂದು ಹೋಗಿದೆ.
ವಿಷಯ ತಿಳಿದ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ರೈತನ ಜಮೀನಿಗೆ ಧಾವಿಸಿ ಬೆಂಕಿ ಆರಿಸುವ ಪ್ರಯತ್ನ ಮಾಡಿದ್ದಾರೆ. ಆದರೆ, ಬೆಂಕಿ ದಟ್ಟವಾಗಿ ಕಾಣಿಸಿದ್ದರಿಂದ ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಡಬೇಕಾಯಿತು.
ಕೊನೆಗೆ ಬೆಂಕಿ ನಂದಿಸುವ ಕಾರ್ಯ ಯಶಸ್ವಿಯಾದರೂ ತೋಟದಲ್ಲಿದ್ದ ಫಸಲು ಕೈಮೀರಿ ಹೋಗಿತ್ತು. ಬಾಳೆ ಗಿಡಗಳ ಜೊತೆಗೆ ಡ್ರಿಪ್, ಪೈಪ್ ಎಲ್ಲವೂ ಸುಟ್ಟು ಭಸ್ಮವಾಗಿವೆ. ಇದರಿಂದ ನಮಗೆ ಲಕ್ಷಾಂತರ ರೂಪಾಯಿ ಹಣ ನಷ್ಟ ಉಂಟಾಗಿದೆ.
ಇಂಜಿನಿಯರ್ ಬಸವರಾಜ್ ಅವರು ಮುಂಜಾಗ್ರತಾ ಕ್ರಮವಾಗಿ ಕ್ರಮ ಕೈಗೊಳ್ಳದೇ ಬೆಂಕಿ ಹಚ್ಚಿದ್ದರು. ಆ ಬೆಂಕಿ ಇಡೀ ನಮ್ಮ ಮಾವನ ಬಾಳೆ ತೋಟಕ್ಕೆ ತಗುಲಿ ಸುಮಾರು 2500 ಬಾಳೆ ಗಿಡಗಳು ಸುಟ್ಟು ಕರಕಲಾಗಿವೆ.
ಪಕ್ಕದ ಜಮೀನು ಮಾಲೀಕನ ವಿರುದ್ಧ ಕ್ರಮಕೈಗೊಳ್ಳಬೇಕು. ದೂರವಾಣಿ ಮೂಲಕ ಅವರನ್ನು ಸಂಪರ್ಕಿಸಿ, ಘಟನೆ ಬಗ್ಗೆ ತಿಳಿಸಿದರೂ ಸೌಜನ್ಯಕ್ಕಾದರೂ ನಮಗೆ ಸ್ಪಂದಿಸಿಲ್ಲ. ಬಂದು ನೋಡಿಲ್ಲ. ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಹಾಗೂ ಅವರಿಂದ ನಮಗೆ ಪರಿಹಾರವನ್ನು ಕೊಡಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.