ಚಿತ್ರದುರ್ಗ: ರಾಜ್ಯದಲ್ಲಿ ಸುರಿದ ಮಹಾ ಮಳೆಗೆ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಸದ್ಯ ಸ್ವಲ್ಪ ಮಟ್ಟಿಗೆ ಪ್ರವಾಹ ಭೀತಿಯಿಂದ ಹೊರಬಂದಿದ್ದರೂ ತಾವೂ ಕಳೆದುಕೊಂಡಿರುವ ಮನೆ, ಅಡುಗೆ ಸಾಮಗ್ರಿಗಳು ಹಾಗೂ ಬಹುತೇಕ ಎಲ್ಲ ಮೂಲಭೂತ ಸೌರ್ಕಯವನ್ನು ಕಳೆದುಕೊಂಡು ಸಂಕಷ್ಟದಲ್ಲಿ ಬದುಕುವ ಸ್ಥಿತಿ ಎದುರಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಉತ್ತರ ಕರ್ನಾಟಕ ಮತ್ತು ಕೊಡಗಿನಲ್ಲಿರುವ ನಿರಾಶ್ರಿತರಿಗೆ ರಾಜ್ಯದ ಜನತೆ ತಮ್ಮ ಕೈಲಾದ ಸಹಾಯ ನೀಡಿ ಮಾನವೀಯತೆ ಮೆರೆಯುತ್ತಿದ್ದಾರೆ.
ಸದ್ಯ ಸಮೃದ್ಧ ಮಳೆಯೆ ಕಾಣದ, ಬರಪೀಡಿತ ಕೋಟೆನಾಡು ಚಿತ್ರದುರ್ಗ ಜಿಲ್ಲೆಯಿಂದ ಉತ್ತರ ಕರ್ನಾಟಕ ಭಾಗದ ನೆರೆ ಸಂತ್ರಸ್ತರಿಗೆ ಮೂಲಭೂತವಾಗಿ ಬೇಕಿರುವ ಆಹಾರವನ್ನು ನೀಡಲು ಮುಂದಾಗಿದೆ. ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಹಿರೇ ಎಮ್ಮಿಗನೂರು ಗ್ರಾಮಸ್ಥರು ಬೆಳಗಾವಿಯ ನೆರೆ ಪೀಡಿತರಿಗೆ ಅಡುಗೆ ಸಾಮಗ್ರಿ ಹಾಗೂ 10 ಸಾವಿರ ರೊಟ್ಟಿ ಸೇರಿ ಅಗತ್ಯ ಸಾಮಗ್ರಿಗಳ ನೆರವು ನೀಡಿದ್ದಾರೆ.
![assistance-to-the-affected-area-from-chitradurga-district](https://etvbharatimages.akamaized.net/etvbharat/prod-images/4131645_kvn123854.jpg)
ಗ್ರಾಮದ ಮುಖಂಡರುಗಳಾದ ನಾಗರಾಜ್, ಪಿ.ಎಸ್ ಬಸವರಾಜಪ್ಪ, ಡಿ.ಸಿ ಶೇಖರಪ್ಪ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಈಶ್ವರಪ್ಪ ಸೇರಿದಂತೆ ಹಲವು ಮುಖಂಡರು ನೇರವಾಗಿ ಸಂತ್ರಸ್ತರನ್ನ ಭೇಟಿಯಾಗಿ ನೆರವು ನೀಡಿದ್ದಾರೆ. ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ತಳಕಟ್ಟಾಳು, ಮುಸುಗುಪ್ಪಿ, ಹಡಿನಾಳು, ಸಂಗನಕೇರಿ ಸೇರಿದಂತೆ 10 ಗ್ರಾಮಗಳಿಗೆ ತೆರಳಿ ಸಂತ್ರಸ್ತರನ್ನ ಭೇಟಿ ಮಾಡಿ ಅಗತ್ಯ ವಸ್ತುಗಳನ್ನ ನೀಡುವ ಮೂಲಕ ನಾವು ನಿಮ್ಮೊಂದಿಗಿದ್ದೇವೆ ಎಂದು ಧೈರ್ಯ ತುಂಬಿದ್ದಾರೆ.