ಚಿತ್ರದುರ್ಗ: ಜಾನುವಾರು ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್‌ಪಿ ಜಿ.ರಾಧಿಕಾ ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳಲ್ಲಿ ಜಾನುವಾರು ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದ ಹಾಸನ ಮೂಲದ ಅಭಿಷೇಕ ಮಂಜೇಗೌಡ (24) ಹಾಗೂ ಚಿಕ್ಕಮಗಳೂರು ಮೂಲದ ಮಹಮ್ಮದ್ ಶಾಕೀರ್ (22) ಎಂಬ ಇಬ್ಬರನ್ನು ಬಂಧಿಸಲಾಗಿದೆ. ಆರೋಪಿಗಳಿಂದ 1.50 ಲಕ್ಷ ನಗದು ಹಣ ಜಪ್ತಿ ಮಾಡಲಾಗಿದೆ ಎಂದರು.
ಆರೋಪಿಗಳು ಅಶೋಕ್ ಲೇಲ್ಯಾಂಡ್ ವಾಹನದಲ್ಲಿ ಜಿಲ್ಲೆಯಲ್ಲಿ ಸಂಚರಿಸಿ ಮೊದಲು ಮನೆಗಳಲ್ಲಿರುವ ಜಾನುವಾರುಗಳ ಬಗ್ಗೆ ತಪಾಸಣೆ ನಡೆಸಿ, ಮಾಲೀಕರಿಲ್ಲದ ಸಮಯದಲ್ಲಿ ಜಾನುವಾರಗನ್ನು ಕಳವು ಮಾಡುತ್ತಿದ್ದರು. ಈ ಬಗ್ಗೆ ಅಬ್ಬಿನಹೊಳೆ, ಹಿರಿಯೂರು ಗ್ರಾಮಾಂತರ ಹಾಗೂ ಐಮಂಗಲ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದ್ದವು.
ಓದಿ: ನಕಲಿ ಕೀ ಬಳಸಿ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಯ ಬಂಧನ
ಹಿರಿಯೂರು ತಾಲೂಕಿನ ಧರ್ಮಾಪುರ ಗ್ರಾಮದಲ್ಲಿ ಗಸ್ತು ತಿರುಗುತ್ತಿದ್ದ ಸಮಯದಲ್ಲಿ ಅನುಮಾನಾಸ್ಪದವಾಗಿ ಓಡಾಟ ನಡೆಸುತ್ತಿದ್ದ ಇಬ್ಬರನ್ನು ಪೊಲೀಸರು ವಿಚಾರಣೆ ನಡೆಸಿದಾಗ ಜಾನುವಾರು ಕಳ್ಳತನ ಮಾಡುತ್ತಿರುವ ಕುರಿತು ಒಪ್ಪಿಕೊಂಡಿದ್ದಾರೆ.