ಚಿತ್ರದುರ್ಗ: ಗ್ರಾಮದ ಅಭಿವೃದ್ಧಿಯಲ್ಲಿ ಶಾಸಕರೊಂದಿಗೆ ಅಧಿಕಾರಿಗಳು ಕೈ ಜೋಡಿಸುವುದು, ಅಧಿಕಾರಿಗಳಿಗೆ ಶಾಸಕರು ಸಲಹೆ ನೀಡುವುದು ಸಾಮಾನ್ಯ. ಆದ್ರೆ ನಿನ್ನೆ ಇಲ್ಲಿ ನಡೆದ ಸಭೆಯಲ್ಲಿ ಶಾಸಕರು ಮತ್ತು ತಹಶೀಲ್ದಾರ್ ಮಧ್ಯೆ ಮಾತಿನ ಚಕಮಕಿ ನಡೆಯಿತು. ಚಳ್ಳಕೆರೆ ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸ್ಮಶಾನ ಅಭಿವೃದ್ದಿ, ಆಶ್ರಯ, ಕುಡಿಯುವ ನೀರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಘಟನೆ ನಡೆಯಿತು.
ಸಭೆಯಲ್ಲಿ ಶಾಸಕ ಟಿ.ರಘುಮೂರ್ತಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ, ಗ್ರಾಮ ವಾಸ್ತವ್ಯ, ಜನ ಸಂಪರ್ಕ ಸಭೆಗಳಲ್ಲಿ ಗ್ರಾಮೀಣ ಜನರ ಕುಂದುಕೊರತೆಗಳ ಬಗ್ಗೆ ಅರ್ಜಿ ಸ್ವೀಕರಿಸಿ ಸಮಸ್ಯೆ ಬಗೆಹರಿಸಬೇಕು. ಆದ್ರೆ ಇದರ ಬದಲು ಎತ್ತಿನ ಗಾಡಿ, ವಾದ್ಯಗಳ ಮೆರವಣಿಗೆಗೆ ಮಾತ್ರ ಸೀಮಿತವಾಗಿದೆ. ಗ್ರಾಮೀಣ ಜನರ ಕುಂದುಕೊರತೆಗಳನ್ನು ಬಗೆಹರಿಸದೆ ಕಾಟಾಚಾರಕ್ಕೆ ಗ್ರಾಮ ವಾಸ್ತವ್ಯ ನಡೆಯುತ್ತಿದೆ ಎಂದು ಅಧಿಕಾರಿಗಳ ವಿರುದ್ಧ ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕಿನ ಟಿ.ಎನ್.ಕೋಟೆ ಗ್ರಾಮದಲ್ಲಿ ಸರಕಾರಿ ಶಾಲೆ ಹಾಗೂ ಸ್ಮಶಾನ ಭೂಮಿ ಒತ್ತುವರಿಯಾಗಿ ಎರಡು ವರ್ಷ ಕಳೆದರೂ ಬಗೆಹರಿಸಿಲ್ಲ. ನಾನು ಶಾಸಕನಾಗಿ ಹತ್ತು ವರ್ಷವಾಗುತ್ತಿದ್ದು, ಯಾವ ಸಮುದಾಯ ಅಥವಾ ಸಂಘ ಸಂಸ್ಥೆಯವರು ನಿವೇಶನ, ಭೂಮಿ ಕೊಡಿ ಎಂದು ಅರ್ಜಿ ಸಲ್ಲಿಸಿಲ್ಲ. ನೀವು ಅಧಿಕಾರಕ್ಕೆ ಬಂದಾಗಿನಿಂದ ಖಾಸಗಿಯವರಿಂದ ಹೆಚ್ಚು ಅರ್ಜಿಗಳು ಬರುತ್ತಿವೆ. ನಾನು ಮಂಜೂರಾತಿ ಮಾಡಲು ಸಿದ್ದನಿದ್ದೇನೆ. ಆದರೆ ಶಾಸರು ಅಡ್ಡಿಪಡಿಸುತ್ತಿದ್ದಾರೆ ಎಂದು ವಿವಿಧ ಸಮುದಾಯಗಳು ನನ್ನ ಬಗ್ಗೆ ಸುಳ್ಳು ವದಂತಿ ಹರಡುತ್ತಿವೆ. ಇದಕ್ಕೆ ಸರಿಯಾಗಿ ಸ್ಪಷ್ಟನೆ ನೀಡುವಂತೆ ತಹಶೀಲ್ದಾರ್ಗೆ ಶಾಸಕರು ತಿಳಿಸಿದರು.
ತಹಶೀಲ್ದಾರ್ ಎನ್.ರಘುಮೂರ್ತಿ ಮಾತನಾಡಿ, ನಾನು ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಯಾವುದೇ ಕಳಂಕದ ಕೆಲಸ ಮಾಡಿಲ್ಲ. ನಾನೇ ಜನರಿಗೆ ಹೇಳಿದ್ದೇನೆ ಎಂದು ಸಾಬೀತುಪಡಿಸಿ. ನಾನು ಅವರ ವಿರುದ್ದ ಕೇಸು ಹಾಕುತ್ತೇನೆ ಎಂದು ನುಡಿದರು. ಟಿ.ರಘುಮೂರ್ತಿ ಪ್ರತಿಕ್ರಿಯಿಸಿ, ನೀವು ಸಭೆ ಸಮಾರಂಭಗಳಿಗೆ ಹೋದಲ್ಲಿ ರಾಜಕಾರಣಿಗಳಂತೆ ಭರವಸೆ ಕೊಡುವುದನ್ನು ಬಿಡಿ. ಒಬ್ಬ ತಾಲೂಕು ದಂಡಾಧಿಕಾರಿಯಾಗಿ ಕೆಲಸ ಮಾಡಿದರೆ ಯಾವುದೇ ಸಮಸ್ಯೆ ಬರುವುದಿಲ್ಲ ಎಂದರು.
ತಹಶೀಲ್ದಾರ್ ಸಭೆಯ ವೇದಿಕೆಯ ಟೇಬಲ್ ಕುಟ್ಟಿ, ನೀವು ನನ್ನನ್ನೇ ಟಾರ್ಗೆಟ್ ಮಾಡಿ ಬೈಯ್ತಿರೋದೆಷ್ಟು ಸರಿ? ಒಬ್ಬ ನಿಷ್ಠಾವಂತ ಅಧಿಕಾರಿಯ ತೇಜೋವಧೆ ಮಾಡುವುದು ಸರಿಯಲ್ಲ. ನೀವು ಮನಸ್ಸಿನಲ್ಲಿ ಏನೇನೋ ಇಟ್ಟುಕೊಂಡು ಮಾತನಾಡುವುದು ಸರಿಯಲ್ಲ. ನನ್ನ ಏನು ಮಾಡಿಕೊಳ್ಳುತ್ತೀರೋ ಮಾಡಿಕೊಳ್ಳಿ ಎಂದು ಆಕ್ರೋಶ ಹೊರಹಾಕಿದರು. ಬಳಿಕ ಸಭೆಯ ವೇದಿಕೆಯಿಂದ ಕೆಳಗಿಳಿದು ಹೊರಟು ಹೋದರು.
ಶಾಸಕ ಟಿ.ರಘುಮೂರ್ತಿ ಮಾತನಾಡಿ, ವಿವಿಧ ಇಲಾಖೆಗಳ ಅಧಿಕಾರಿಗಳು ಸರಕಾರಿ ವಾಹನ ಬಳಕೆ ಮಾಡಿರುವ ಬಗ್ಗೆ ಮಾಹಿತಿ ನೀಡಿ. ಗುತ್ತಿಗೆ ವಾಹನವಾದರೆ ಡೈರಿ ತೋರಿಸಿ. ಜನಸೇವೆ ಮಾಡುವ ಬದಲು ಇಲಾಖೆ ವಾಹನ ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಆರೋಪಗಳಿವೆ ಎಂದು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸ್ಮಶಾನ ಒತ್ತುವರಿ ಮಾಡಿಕೊಂಡವರಿಗೆ ನೋಟಿಸ್ ಜಾರಿ ಮಾಡಿ ತೆರವುಗೊಳಿಸಿ. ಮುಂದಿನ ಸಭೆಗೆ ಎಲ್ಲಾ ಒತ್ತುವರಿ ತೆರವುಗೊಳಿಸಿ ಅಭಿವೃದ್ಧಿಪಡಿಸಿರುವ ಬಗ್ಗೆ ನಾಮಫಲಕ ಹಾಕಿ ಫೋಟೋ ನೀಡುವಂತೆ ಸೂಚನೆ ಕೊಟ್ಟರು. ತಾಲೂಕಿನ ನನ್ನಿವಾಳ ಗ್ರಾ.ಪಂ ವ್ಯಾಪ್ತಿಯ 36 ಹಟ್ಟಿಗಳ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಸೂಚನಾ ಫಲಕ ಅಳವಡಿಸುವಂತೆ ಎಇಇ ಕಾವ್ಯ ಅವರಿಗೆ ಹೇಳಿದರು. ಕಾರ್ಯಕ್ರಮದಲ್ಲಿ ತಾ.ಪಂ. ಇಒ ಹೊನ್ನಯ್ಯ, ಸಹಾಯಕ ನಿರ್ದೇಶಕ ಸಂತೋಷ್, ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ಪಿಡಿಒಗಳು ಇದ್ದರು.
ಇದನ್ನೂ ಓದಿ: ಮೆಕ್ಕೆಜೋಳ ಸುಟ್ಟು ಕರಕಲಾದ ಸ್ಥಳಕ್ಕೆ ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಭೇಟಿ, ಪರಿಶೀಲನೆ!