ಚಿತ್ರದುರ್ಗ: ವರುಣ ದೇವನ ಕೃಪೆಯಿಂದ ಕರೆ ಮೈದುಂಬಿಕೊಂಡಿತ್ತು. ಭರ್ತಿಯಾಗಿದ್ದ ಕೆರೆ ನೀರು ನೋಡಿ ಅನ್ನದಾತರು ಖುಷಿಪಟ್ಟಿದ್ದರು. ಇನ್ನೇನು ಕೆರೆ ತುಂಬಿತು ಅಂತ ಎಲ್ರೂ ಖುಷಿಯಲ್ಲಿ ಇರುವಾಗಲೇ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು, ಸ್ಥಳೀಯ ಶಾಸಕರು ಅಭಿವೃದ್ಧಿ ಹೆಸರಿನಲ್ಲಿ ಭರ್ತಿಯಾಗಿದ್ದ ಕೆರೆಯನ್ನೇ ಖಾಲಿ ಮಾಡಿಸಿದ್ದಾರೆ ಎಂದು ರೈತರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣದ ಐತಿಹಾಸಿಕ ಕೆರೆ 8 ವರ್ಷದ ಬಳಿಕ ಭರ್ತಿಯಾಗಿತ್ತು. ಆದ್ರೆ, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಮತ್ತು ಸ್ಥಳೀಯ ಶಾಸಕ ಎಂ. ಚಂದ್ರಪ್ಪ ಕೆರೆ ಅಭಿವೃದ್ಧಿಪಡಿಸುತ್ತೇವೆ. ಕೆರೆ ಮಧ್ಯೆ ಶಿವನ ಪ್ರತಿಮೆ ನಿರ್ಮಾಣ ಮಾಡ್ತೇವೆ ಅಂತ ತುಂಬಿದ್ದ ಕೆರೆಯ ಕಟ್ಟೆ ಒಡೆಸಿ ನೀರು ಹೊರಗೆ ಬಿಡಿಸಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
ಕೆರೆ ಅಭಿವೃದ್ಧಿ, ಹೂಳೆತ್ತುವುದು, ಕೆರೆ ಮಧ್ಯೆ ಪ್ರತಿಮೆ ಸೇರಿದಂತೆ ಯಾವುದೇ ಕೆಲಸ ಮಾಡಬೇಕೆಂದರೆ ಕೆರೆ ಖಾಲಿಯಾದಾಗ ಅಥವಾ ಬೇಸಿಗೆ ಕಾಲದಲ್ಲಿ ನೀರು ಕಡಿಮೆಯಾದಾಗ ಆಧುನಿಕ ತಂತ್ರಜ್ಞಾನ ಬಳಿ ಕಾಮಗಾರಿ ಮಾಡಬೇಕು. ಆದರೆ, ಇಲ್ಲಿನ ಅಧಿಕಾರಿಗಳು, ಶಾಸಕರು, ಗುತ್ತಿಗೆದಾರು ಕೆರೆ ತುಂಬಿದಾಗಲೇ ಹಿಟಾಚಿ ಮೂಲಕ ಕೆರೆ ಕೋಡಿ ಒಡೆದು ಹಾಕಿಸಿದ್ದಾರೆ ಎಂದು ಅನ್ನದಾತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮೈಸೂರಿನಲ್ಲಿ ಕ್ಲೋರಿನ್ ಅನಿಲ ಸೋರಿಕೆ: ಅಗ್ನಿಶಾಮಕ ದಳದ 6 ಮಂದಿ ಅಸ್ವಸ್ಥ
ಈ ಮೂದಲು ರೈತರು ಆಕ್ರೋಶ ವ್ಯಕ್ತಪಡಿಸಿ ಕೆರೆ ಕೋಡಿ ಮುಚ್ಚಿಸಿದ್ರೆ, ಇದೀಗ ಪುನಃ ಅಧಿಕಾರ ಬಳಸಿಕೊಂಡು ಪೊಲೀಸರನ್ನು ಮುಂದಿಟ್ಟುಕೊಂಡು ಪುನಃ ಕೆರೆ ಕಟ್ಟೆ ಒಡೆಸಿ ಖಾಲಿ ಮಾಡಿಸಿದ್ದಾರೆ. ಶಿವನ ಪ್ರತಿಮೆ ನಿರ್ಮಾಣ, ಕೆರೆ ಅಭಿವೃದ್ಧಿಗೆ ನಮ್ಮ ವಿರೋಧವಿಲ್ಲ. ಆದ್ರೆ, ಕೆರೆ ನೀರು ಖಾಲಿ ಮಾಡಿಸಿ, ರೈತರಿಗೆ ಮರಣಶಾಸನ ಬರೆಸಿ ಅಭಿವೃದ್ಧಿ ಮಾಡೋದು ಬೇಕಿತ್ತಾ ಎನ್ನುತ್ತಾರೆ ಅನ್ನದಾತರು. ಜಲಸಂಪತ್ತು ಉಳಿಸಬೇಕಿದ್ದ ಅಧಿಕಾರಿಗಳು, ಶಾಸಕರು ಮಾಡಿರುವ ಈ ಕಾರ್ಯಕ್ಕೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.