ಚಿತ್ರದುರ್ಗ: ಲಾಕ್ಡೌನ್ನಲ್ಲಿ ಬೆಳೆದ ಬೆಳೆ ವ್ಯಾಪಾರವಾಗದೇ ತೊಂದರೆಯಲ್ಲಿರುವ ರೈತರಿಗೆ ನಟ ಉಪೇಂದ್ರ ನೆರವಾಗಿದ್ದಾರೆ.
ಲಾಕ್ಡೌನ್ ವೇಳೆ ರೈತರು ಬೆಳೆದ ಬೆಳೆ ವ್ಯಾಪಾರವಾಗದೇ ಸಂಕಷ್ಟದಲ್ಲಿರುವ ರೈತರಿಗೆ ನಟ ಉಪೇಂದ್ರ ಅವರು ನಮಗೆ ಅವಶ್ಯಕತೆ ಇರುವ ಬೆಳೆಯನ್ನು ನಿಮ್ಮ ಬಳಿ ಸೂಕ್ತ ಬೆಲೆಗೆ ಕೊಂಡುಕೊಳ್ಳುತ್ತೇವೆ ಎಂದು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದರು. ಇದನ್ನು ಗಮನಿಸಿದ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಪಟ್ರೇಹಳ್ಳಿ ಗ್ರಾಮದ ಮಹೇಶ್ ಎಂಬವರು ಉಪೇಂದ್ರ ಅವರಿಗೆ ಕರೆ ಮಾಡಿ ವಿಚಾರಿಸಿ ಈರುಳ್ಳಿಯನ್ನು ಮಾರಾಟ ಮಾಡಿ ಬಂದಿದ್ದಾರೆ. 60 ಚೀಲ (3,000 ಕೆಜಿ) ಈರುಳ್ಳಿಗೆ ಬಾಡಿಗೆ ಸೇರಿಸಿ 37 ಸಾವಿರ ರೂ. ಹಣ ಕೊಟ್ಟು ಖರೀದಿಸಿ ಸಂಕಷ್ಟದಲ್ಲಿದ್ದ ರೈತನಿಗೆ ನೆರವಾಗಿದ್ದಾರೆ.
ರೈತ ಮಹೇಶ್ ಮಾತನಾಡಿ, ಒಂದು ಎಕರೆಯಲ್ಲಿ ಈರುಳ್ಳಿ ಬೆಳೆದಿದ್ದೆ. 70 ಚೀಲ ಈರುಳ್ಳಿ ಬಂದಿದ್ದು, ಅದರಲ್ಲಿ 10 ಚೀಲ ಕೊಳೆತು ಹೋಗಿತ್ತು. ಉಳಿದ ಈರುಳ್ಳಿ ಮಾರಾಟ ಮಾಡಲು ಸೂಕ್ತ ಬೆಲೆ ಸಿಗುತ್ತಿಲ್ಲ ಎಂದು ಹಾಗೆಯೇ ಶೇಖರಿಸಿದ್ದೆವು. ಉಪೇಂದ್ರ ಅವರು ಹಾಕಿದ್ದ ಪೋಸ್ಟ್ ನೋಡಿ ಕರೆ ಮಾಡಿ ವಿಚಾರಿಸಿದಾಗ, ಅವರು ತಂದುಕೊಡಿ ಎಂದರು. ನಮಗೆ ಲಾಭಕ್ಕಿಂತ ಹೆಚ್ಚು ಬೆಲೆ ಸಿಕ್ಕಿರುವುದು ಖುಷಿಯಾಗಿದೆ.
ಇದನ್ನೂ ಓದಿ: ಜಿಲ್ಲೆ, ರಾಜ್ಯ ಕಾಂಗ್ರೆಸ್ ನಾಯಕರ ಜೊತೆ ರಣದೀಪ್ ಸುರ್ಜೇವಾಲ ವರ್ಚುವಲ್ ಸಭೆ
ತಡರಾತ್ರಿ ಈರುಳ್ಳಿ ತೆಗೆದುಕೊಂಡು ಹೋದೆವು. ಅದನ್ನು ಅವರು ಖರೀದಿಸಿ ಕಾರ್ಮಿಕರಿಗೆ ಹಂಚುತ್ತಿರುವುದು ಬಹಳ ಖುಷಿಯಾಯಿತು. ಇಂತಹ ಸಂದರ್ಭದಲ್ಲಿ ಅವರು ಮಾಡುವ ಸಾಮಾಜಿಕ ಕಾರ್ಯ ನೋಡಿ ನಮಗೆ ಲಾಭ ಬೇಡ ಎನಿಸಿತು. ರೈತರಿಗೆ ಅನುಕೂಲ ಆಗಲಿ ಎಂದು ಮುಂದೆ ಬಂದಿರುವುದು ಸಂತಸದ ವಿಚಾರ. ಮಾರುಕಟ್ಟೆಯಲ್ಲಿ ಈ ಬೆಲೆ ಸಿಗುತ್ತಿರಲಿಲ್ಲ. ಉಪೇಂದ್ರರವರು ಉತ್ತಮ ಕಾರ್ಯ ನಿರ್ವಹಿಸುತ್ತಿದ್ದಾರೆ, ನಾವು ಕೂಡ ಅವರಿಗೆ ಕೈ ಜೋಡಿಸಬೇಕು ಎಂದು ರೈತ ಮಹೇಶ್ ತಿಳಿಸಿದರು.