ಚಿತ್ರದುರ್ಗ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಯಾವುದಾದರೂ ಒಂದು ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತವನ್ನು ಮಾಜಿ ಸಂಸದ, ಚಿತ್ರ ನಟ ಶಶಿಕುಮಾರ್ ವ್ಯಕ್ತಪಡಿಸಿದರು.
ಜಿಲ್ಲೆಯ ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯಲ್ಲಿರುವ ಸ್ನೇಹಿತ ವಳ್ಳಿ ಪ್ರಕಾಶ್ ನಿವಾಸಕ್ಕೆ ಭೇಟಿ ನೀಡಿದ್ದ ಶಶಿಕುಮಾರ್ ಆಪ್ತರ ಜತೆ ಚರ್ಚೆ ಮಾಡಿದರು. ಕಳೆದ ಅವಧಿಯಲ್ಲಿ ಸಂಸದನಾಗಿ ಉತ್ತಮ ಕೆಲಸ ಮಾಡಿದ್ದೇನೆ. ನಾನು ಮಾಡಿರುವ ಕಾರ್ಯಗಳು ಇಂದಿಗೂ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿವೆ. ವಿಧಾನಸಭಾ ಚುನಾವಣೆಯಲ್ಲಿಯೇ ಸ್ಪರ್ಧಿಸಿ ಕಡಿಮೆ ಅಂತರದಲ್ಲಿ ಪರಾಜಿತಗೊಂಡಿದ್ದೆ. ಈ ಬಾರಿ ಎಸ್ಟಿ ಮೀಸಲು ಕ್ಷೇತ್ರದಲ್ಲಿ ಸ್ಪರ್ಧಿಸಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಕೆಲವೇ ದಿನಗಳಲ್ಲಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಪ್ರವಾಸ ಮಾಡುತ್ತೇನೆ. ಈ ಬಾರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಯಾವುದಾದರೂ ಪಕ್ಷದಿಂದ ಜಿಲ್ಲೆಯ 6 ತಾಲೂಕುಗಳಲ್ಲಿ ಯಾವುದಾದರೂ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಕಣಕ್ಕಿಳಿಯುವುದು ನಿಶ್ಚಿತ. ಕೆಲವೇ ದಿನಗಳಲ್ಲಿ ಕ್ಷೇತ್ರ ಪ್ರವಾಸ ಕೈಗೊಳ್ಳುವೆ. ಚಳ್ಳಕೆರೆ ನಗರದಲ್ಲಿಯೇ ನಮಗಾಗಿ ವಸತಿಯೂ ಸಿದ್ದವಿದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಪಕ್ಷ ಮತ್ತು ಕ್ಷೇತ್ರ ಘೋಷಣೆ
ಯಾವ ಪಕ್ಷದಿಂದ ಸ್ಪರ್ಧಿಸುವಿರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕೀಯ ಬೆಳವಣಿಗೆಯಲ್ಲಿ ಯಾವ ಪಕ್ಷದಿಂದ ಟಿಕೆಟ್ ನೀಡುವರೋ ಎಂಬುವುದನ್ನು ಕಾದು ನೋಡಬೇಕಿದೆ. ಮುಂದಿನ ದಿನಗಳಲ್ಲಿ ಪಕ್ಷ ಮತ್ತು ಕ್ಷೇತ್ರ ಘೋಷಣೆ ಮಾಡುವುದಾಗಿ ಶಶಿಕುಮಾರ್ ತಿಳಿಸಿದರು.
ಇನ್ನು ಮೊಳಕಾಲ್ಮೂರು ಅಥವಾ ಚಳ್ಳಕೆರೆ ವಿಧಾನಸಭಾ ಕ್ಷೇತ್ರಗಳು ಎಸ್ಟಿ ಮೀಸಲು ಕ್ಷೇತ್ರಗಳಾಗಿದ್ದು, ಬಹುತೇಕ ಎರಡು ಕ್ಷೇತ್ರಗಳಲ್ಲಿ ಒಂದಕ್ಕೆ ಸ್ಪರ್ಧೆ ಮಾಡಿದರೆ ಹಾಲಿ ಶಾಸಕರಿಗೆ ತಲೆನೋವು ಆಗುವುದಂತೂ ಸತ್ಯ. ಈ ಸಂದರ್ಭ ವಳ್ಳಿ ಪ್ರಕಾಶ್, ಜಾಕಿರ್ ಹುಸೇನ್, ಮಾರುತಿ, ರಂಗಸ್ವಾಮಿ, ಮಹಲಿಂಗಪ್ಪ, ಕಲ್ಯಾಣ್, ಸೈಯದ್, ಚಾಂದಭಾಷಾ ಇದ್ದರು.
ಇದನ್ನೂ ಓದಿ: ಕುರಿಗಾಯಿಗಳ ವೋಟಿಗಾಗಿ ಕಂಬಳಿ ಹೊದ್ದು ಪ್ರಚಾರ ನಡೆಸುವ ನಾಟಕ ನಿಲ್ಲಿಸಿ: ಸಿಎಂಗೆ ಸಿದ್ದರಾಮಯ್ಯ ಟಾಂಗ್